

ಮೈಸೂರು: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೈಸೂರು ತಾಲೂಕು ಘಟಕದಿಂದ ವಿಜಯನಗರದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ರೈತರನ್ನು ನಿರ್ಲಕ್ಷ್ಯ ಮಾಡುತ್ತಿವೆ. ಕೇಂದ್ರ ಸರ್ಕಾರ ವಿದ್ಯುತ್ ನೀತಿ ಜಾರಿಗೆ ತರಲು ಮುಂದಾಗಿದ್ದು, ಕೃಷಿ ಪಂಪ್‌ಸೆಟ್‌ದಾರರ ಆಧಾರ್ ಲಿಂಕ್ ಮಾಡಿ, ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.
ಹೊಸ ವಿದ್ಯುತ್‌ಸಂಪರ್ಕ ಪಡೆಯಲು ರೈತರೇ ಲಕ್ಷಾಂತರ ರೂಪಾಯಿ ಹೊರೆ ಹೊರಬೇಕಾದ ಪರಿಸ್ಥಿತಿ ಉಂಟಾಗಿದೆ. ರೈತರ ಕೃಷಿ ಪಂಪ್‌ಸೆಟ್‌ಗೆ ನೀಡುತ್ತಿರುವ ವಿದ್ಯುತ್ ಅನ್ನು ಲೋಡ್‌ಸೆಡ್ಡಿಂಗ್ ಮಾಡುತ್ತಿರುವುದರಿಂದ ಪ್ರತಿದಿನ ಬೆಳಗಿನ ಸಮಯದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳುತ್ತಿರುವುದು ಸುಳ್ಳು. ಬಹುತೇಕ ಕಡೆ 4-5 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ವಿದ್ಯುತ್ ದರವನ್ನು ಆಗಿಂದಾಗ್ಗೆ ಹೆಚ್ಚಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತಿದೆ. ರಾಜ್ಯಾದ್ಯಂತ ಬೇಸಿಗೆ ಪ್ರಾರಂಭವಾಗಿದ್ದು, ಉಷ್ಣಾಂಶ ಅತಿ ಹೆಚ್ಚಿದ್ದು, ಕೃಷಿ ಪಂಪ್‌ಸೆಟ್ ಮೂಲಕ ವ್ಯವಸಾಯ ಮಾಡುವ ರೈತರಿಗೆ ವಿದ್ಯುತ್ ಸರಬರಾಜು ಸರಿಯಾದ ಸಮಯಕ್ಕೆ ಇಲ್ಲದಿರುವುದರಿಂದ ಹಲವು ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ಹಕ್ಕೋತ್ತಾಯಗಳು:
ಸರ್ಕಾರ ತೀರ್ಮಾನಿಸಿದಂತೆ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಹಗಲಿನ ವೇಳೆ ಕನಿಷ್ಠ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋದರೆ ನಿಗದಿತ ಕಾಲಾವಧಿಯೊಳಗೆ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ತಾಂತ್ರಿಕ ತೊಂದರೆಗಳನ್ನು ಮುಂದಿಟ್ಟುಕೊಂಡು ವಿದ್ಯುತ್ ಸರಬರಾಜು ನಿಲ್ಲಿಸಬಾರದು ಎಂದು ಆಗ್ರಹಿಸಿದರು.
ರೈತರು ಹೊಸ ವಿದ್ಯುತ್ ಸಂಪರ್ಕ ಪಡೆಯಲು ಹಿಂದಿನ ರೀತಿಯೇ ಅಕ್ರಮ-ಸಕ್ರಮ ಜಾರಿಗೆ ತರಬೇಕು. ಹೊಸ ಸಂಪರ್ಕ ಪಡೆದುಕೊಳ್ಳಲು ರೈತರೇ ಸ್ವಂತ ವೆಚ್ಚ ಭರಿಸಬೇಕೆಂಬ ನಿಯಮ ಕೈಬಿಟ್ಟು, ಹಳೇ ಪದ್ಧತಿ ಮುಂದುವರೆಸಬೇಕು. ಸ್ಮಾರ್ಟ್ ಮೀಟರ್ ಅವಳಡಿಕೆ ಯೋಜನೆ ಕೈಬಿಡಬೇಕು. ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವುದನ್ನು ಸ್ಥಗಿತಗೊಳಿಸಬೇಕು. ಗೃಹಬಳಕೆ ವಿದ್ಯುತ್ ಕನಿಷ್ಠ ದರ ಮತ್ತು ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರೈತರಿಂದ ಮನವಿ ಸ್ವೀಕರಿಸಿದ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಅವರು ರೈತರ ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದಾರೆ.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಜಿಲ್ಲಾ ಕಾರ್ಯದರ್ಶಿ ನಾಗನಹಳ್ಳಿ ವಿಜೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಮುಖಂಡರಾದ ಮಂಡಕಳ್ಳಿ ಮಹೇಶ್, ಚಂದ್ರಶೇಖರ್, ಎ.ರಾಘವೇಂದ್ರ, ಬಸಪ್ಪನಾಯಕ್ ಮೈದನಹಳ್ಳಿ ಮಹೇಶ್ ಇತರರು ಇದ್ದರು.