ಭೂಮಿ ತಾಯಿ ಹೋರಾಟ ಸಮಿತಿಯಿಂದ ಪ್ರತಿಭಟನೆ

SRP_06-02jpj
ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ರೈತನಾಯಕ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
Published on

ಶ್ರೀಂಗಪಟ್ಟಣ: ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡ ರೈತ ಎಂ.ಡಿ.ಮಂಜೇಗೌಡ ಅವರ ಸಾವಿಗೆ ಪರೋಕ್ಷವಾಗಿ ಕಾರಣರಾದ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ರೈತನ ಸಾವಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಜಮಾವಣೆಗೊಂಡ ಸಮಿತಿ ಕಾರ್ಯಕರ್ತರು, ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಡಳಿತದ ವಿರುದ್ಧ ಸಾಲು ಸಾಲು ಘೋಷಣೆ ಕೂಗಿ ಪ್ರತಿಭಟನಾ ಧರಣಿ ನಡೆಸಿದರು.

ಹೋರಾಟದ ನೇತೃತ್ವ ವಹಿಸಿದ್ದ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದ ಬೊಕ್ಕಸ ಬರಿದಾಗಿದೆ. ಇನ್ನು ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯ ವಿವಿಧ ಹುದ್ದೆಗಳಿಗೆ ಕೋಟಿ ಲೆಕ್ಕದಲ್ಲಿ ಹಣ ಸುರಿಯಬೇಕಿದ್ದು, ಇಂತಹ ಆಡಳಿತದಲ್ಲಿ ಸಾಮಾನ್ಯ ಜನರ ಸಣ್ಣಪುಟ್ಟ ಕಾರ್ಯಗಳಿಗೂ ಲಂಚ ನೀಡಬೇಕಾಗಿದೆ ಎಂದರು.

ತಕ್ಷಣವೇ ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಆತನ ಸಮಸ್ಯೆ ಬಗೆಹರಿಸುವ ಜತೆಗೆ ನ್ಯಾಯಯುತ ಪರಿಹಾರ ನೀಡಬೇಕು. ಇನ್ಮುಂದೆ ಜಿಲ್ಲೆ ಸೇರಿದಂತೆ ರೈತರು ಹಾಗೂ ಸಾಮಾನ್ಯ ಜನರ ಮೇಲಿನ ಶೋಷಣೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಜನವಿರೋಧಿ ಸರ್ಕಾರ ಕಿತ್ತೊಗೆಯಲಾಗುವುದು ಎಂದು ಎಚ್ಚರಿಸಿ ಶಿರಸ್ತೇದಾರ್ ನಾಗೇಶ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.

ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಜಯರಾಮು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ರವಿಲಕ್ಷ್ಮಣ್, ಶಂಕರ್, ಮಹಾಲಿಂಗು ಸುರೇಶ್, ರಾಮಕೃಷ್ಣ, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net