ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಮದ್ಯ ಮಾರಾಟಗಾರರ ಪ್ರತಿಭಟನೆ

Launch of main road development Mandya
Published on

ಮಂಡ್ಯ: ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಟ ಶೇ.20ರಷ್ಟು ಲಾಭಾಂಶ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘದ ಪದಾಧಿಕಾರಿಗಳು ಬೇಡಿಕೆ ಈಡೇರಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ಡಿಸಿ ಕಚೇರಿ ಸಹಾಯಕ ಅಧಿಕಾರಿ ಡಾ.ರೋಹಿಣಿ ಅವರ ಮೂಲಕ ಮನವಿ ಪತ್ರ ರವಾನಿಸಿದರು.

ಇತ್ತೀಚಿನ ದಿನಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ವೃದ್ಧಿಯಾಗಿಲ್ಲ. ಸರ್ಕಾರ ಆದಾಯ ಮಾಡಿಕೊಳ್ಳಲು ನಿಯಮಗಳನ್ನು ಗಾಳಿಗೆ ತೂರಿದೆ. ಅಬಕಾರಿ ಕಾಯ್ದೆಗೆ 2005ರಲ್ಲಿ ತಂದ ತಿದ್ದುಪಡಿಯನ್ನು ಮರು ಪರಿಶೀಲಿಸಬೇಕು. ಎಂ.ಎಸ್.ಐ.ಎಲ್ ಸನ್ನದು ಕುರಿತು ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳಬೇಕು. ಲೈಸನ್‌ಗಳಿಗೆ ತೊಂದರೆ ಕೊಡಬಾರದು. ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡಬೇಕು. ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು. ಲೈಸನ್ಸ್‌ದಾರರ ಬೇಡಿಕೆಗಳನ್ನು ತಕ್ಷಣ ಸರ್ಕಾರ ಈಡೇರಿಸಬೇಕು. ಜಿಲ್ಲಾ ಅಬಕಾರಿ ಅಧಿಕಾರಿ ನಾಗಶಯನ ಅವರ ಮಾರ್ಗದರ್ಶನದಲ್ಲಿ ಲೈಸೆನ್ಸ್‌ದಾರರು ಕೆಲಸ ಮಾಡುತ್ತಿದ್ದು, ಅಧಿಕಾರಿಗಳಿಂದ ಯಾವುದೇ ಕಿರುಕುಳ ಇಲ್ಲ. ಆದರೆ ಸರ್ಕಾರದ ಕ್ರಮಗಳಿಂದ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್, ಸತೀಶ್, ಶಿವಕುಮಾರ್, ಅರುಣ್‌ಕುಮಾರ್, ಮರೀಗೌಡ, ಜಯರಾಂ, ದಾಸೇಗೌಡ, ಗೋವಿಂದರಾಜು, ಅಂಬರೀಷ್, ಕೃಷ್ಣಪ್ಪ, ಶಂಕರೇಗೌಡ, ಸತೀಶ್ ಮೌರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net