

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಚಾಲಕರ ವಿರೋಧಿ ಮಸೂದೆ ವಿರೋಧಿಸಿ ಕರ್ನಾಟಕ ಚಾಲಕರ ಒಕ್ಕೂಟದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಸಿದ್ದಾರ್ಥ ಬಡಾವಣೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಆಟೋ ಚಾಲಕರು ಹಾಗೂ ಮಾಲೀಕರು, ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರು ಡಿ.25ರಂದು ಸಂಸತ್ತಿನಲ್ಲಿ ಚಾಲಕರ ವಿರೋಧಿಯಾದ ಅವೈಜ್ಞಾನಿಕ ಮಸೂದೆಯನ್ನು ಮಂಡನೆ ಮಾಡಿದ್ದಾರೆ ಎಂದು ದೂರಿದರು.
ನೂತನ ಮಸೂದೆ ಪ್ರಕಾರ ಒಬ್ಬ ಚಾಲಕ ಅಪಘಾತ ಮಾಡಿದರೆ ಗಾಯಗೊಂಡವರನ್ನು ರಸ್ತೆಯಲ್ಲೇ ಬಿಟ್ಟು ಹೋಗುವಂತಿಲ್ಲ, ಸ್ಥಳದಲ್ಲೇ ಇದ್ದು ಚಿಕಿತ್ಸೆ ಕೊಡಿಸಬೇಕು. ಮಹಜರು ಸಂದರ್ಭದಲ್ಲಿ ಸ್ಥಳದಲ್ಲಿ ಇರದಿದ್ದರೆ 10 ಲಕ್ಷ ರೂ. ವರೆಗೆ ದಂಡ, 10 ವರ್ಷದ ವರೆಗೆ ಶಿಕ್ಷೆ ವಿಧಿಸಬಹುದಾದ ಕಾನೂನು ತರಲು ಮುಂದಾಗಿದ್ದಾರೆ. ಅದು ಈಗಾಗಲೇ ರಾಷ್ಟ್ರಪತಿಗಳ ಅಂಕಿತಕ್ಕೂ ಹೋಗಿದ್ದು, ಅದನ್ನು ತಕ್ಷಣ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ನೂತನ ಮಸೂದೆ ಚಾಲಕರನ್ನು ಪರೋಕ್ಷವಾಗಿ ಕೊಲ್ಲುವ ಪ್ರಯತ್ನ, ಅಪಘಾತದ ಸಂದರ್ಭದಲ್ಲಿ ಸಾರ್ವಜನಿಕರು ಚಾಲಕರನ್ನು ಥಳಿಸಿ ಕೊಂದಿರುವ ಸಾಕಷ್ಟು ಉದಾಹರಣೆಗಳಿವೆ. ಈ ಕಾನೂನು ಜಾರಿಯಾದರೆ ಚಾಲಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತವೆ. ಸಾರಿಗೆ ಉದ್ಯಮವನ್ನೇ ನೆಚ್ಚಿಕೊಂಡು ಜೀವನ ನಡೆಸುವವರಿಗೆ ಇದು ಮರಣ ಶಾಸನವಾಗಲಿದೆ ಎಂದು ಕಿಡಿ ಕಾರಿದರು.
ಹೊರ ರಾಜ್ಯ ಪರ್ಮಿಟ್‌ಗಳನ್ನು ನಿಲ್ಲಿಸಬೇಕು, ಸಾರಿಗೆ ಇಲಾಖೆಯಿಂದ ಮೈಸೂರು ಜಿಲ್ಲೆಯ ಎಲ್ಲ ಆಟೋ ಚಾಲಕರಿಗೆ ಚಾಲನಾ ಪರವಾನಗಿ ಬ್ಯಾಡ್ಜ್ ವಿತರಿಸಬೇಕು. ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ನಗರದ ಆಟೋಗಳ ಅಂತರದ ಪರ್ಮಿಟ್‌ನ್ನು 25-30 ಕಿ.ಮೀ. ವರೆಗೂ ವಿಸ್ತರಿಸಬೇಕು. ಆಟೋರಿಕ್ಷಾದವರಿಗೆ ಮಾರಕವಾಗಿರುವ ರ‌್ಯಾಪಿಡೋ, ಉಬರ್, ಓಲಾ ಬೈಕ್ ಟ್ಯಾಕ್ಸಿಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಮುರುಗನ್, ಪ್ರಧಾನ ಕಾರ್ಯದರ್ಶಿ ಪಿ.ವಿನಾಯಕ, ನಗರಾಧ್ಯಕ್ಷ ಸತ್ಯನಾರಾಯಣ್‌ಸಿಂಗ್, ಪದಾಧಿಕಾರಿಗಳಾದ ಶಿವಕುಮಾರ್, ಸುರೇಶ್ ಇತರರಿದ್ದರು.