

ವಿಜಯವಾಣಿ ಸುದ್ದಿಜಾಲ ಹಾಸನ
ಕೇಂದ್ರ ಸರ್ಕಾರಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಸಿಎಎ ವಿರುದ್ಧ ಘೋಷಣೆ ಕೂಗಿ ಕೆಲಕಾಲ ಧರಣಿ ನಡೆಸಿದರು.
ಇಂದು ಭಾರತ ದೇಶ ಕಂಡರಿಯದ ಬಡತನ, ನೋಟ್ ಬದಲಾವಣೆಯಿಂದಾದ ಜಿಡಿಪಿ ಕುಸಿತ, ಎಲ್ಲ ರೀತಿಯ ವ್ಯಾಪಾರ ವಹಿವಾಟು ಕಡಿತವನ್ನು ಅನುಭವಿಸುತ್ತಿದೆ. ರಾಷ್ಟ್ರಾದ್ಯಂತ ಸಣ್ಣ, ದೊಡ್ಡ ಉದ್ಯಮಗಳು ಬಾಗಿಲು ಮುಚ್ಚುತ್ತಿರುವುದರಿಂದ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.
ಇಂತಹ ಕಠಿಣ ಸಂದರ್ಭದಲ್ಲಿ ಸರ್ಕಾರ ಜನತೆಯ ಜೀವನ ಸುಗಮಗೊಳಿಸಲು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ಮಾಡುವ ಕಡೆ ಗಮನ ನೀಡಬೇಕಿತ್ತು. ಆದರೆ ಅದನ್ನು ಬಿಟ್ಟು ದೇಶವನ್ನು ವಿಭಜನೆ ಮಾಡುವ ಸಿಎಎ ಜಾರಿಗೊಳಿಸಲು ಮುಂದಾಗಿದೆ ಎಂದು ದೂರಿದರು.
90ರ ದಶಕಗಳ ನಂತರ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್‌ಗಳನ್ನು ದೇಶದ ನಾಗರಿಕರನ್ನು ಗುರುತಿಸುವುದಕ್ಕಾಗಿ ನೀಡಿತು. ಆದರೆ ಈಗ ಅವು ಯಾವುವೂ ಪೌರತ್ವ ಸಾಬೀತುಪಡಿಸುವ ದಾಖಲೆಗಳಲ್ಲ ಎಂದು ಸರ್ಕಾರ ಹೇಳುತ್ತಿದೆ. ಅಲ್ಲದೆ ಧರ್ಮಾಧಾರಿತವಾಗಿ ಪೌರತ್ವ ನೀಡುವ ಒಡೆದು ಆಳುವ ನೀತಿಯನ್ನು ಅನುಸರಿಸಲು ಮುಂದಾಗಿದೆ. ಇದು ದೇಶವನ್ನು ಒಗ್ಗೂಡಿಸುವ ಬದಲು ವಿಭಜನೆ ಮಾಡುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ನೀಡಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಮಾಲಾರ್ಪಣೆ ಮಾಡಿದರು. ದಸಂಸ ಸಂಚಾಲಕ ಮಲ್ಲೇಶ್ ಅಂಬುಗ, ಜಿಲ್ಲಾ ಸಂಚಾಲಕ ಬಿ.ಎಲ್. ಲಕ್ಷ್ಮಣ್, ರಾಜ್ಯ ಸಮಿತಿ ಸದಸ್ಯೆ ಟಿ.ಡಿ. ಸುಮಾ, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಶಿರ್ ಅಹಮದ್, ಬಾಳೆ ಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್, ಡಿವೈಎಫ್‌ಐ ಸಂಘಟನೆಯ ಎಂ.ಜಿ. ಪೃಥ್ವಿ, ರಾಜಣ್ಣ ಸಿಂಗಟಿಗೆರೆ, ಕೃಷ್ಣಯ್ಯ ಇತರು ಪಾಲ್ಗೊಂಡಿದ್ದರು.
24ಎಚ್‌ಎಸ್4
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.