ಭಾರತ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ

33
Published on

ಮೈಸೂರು: ಭಾರತದ ಒಕ್ಕೂಟವಾದಿ ಸ್ವರೂಪ ಬಲಗೊಳಿಸಿ, ರಾಜ್ಯಗಳ ಮೇಲೆ ಹಸ್ತಕ್ಷೇಪ ನಿಲ್ಲಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ (ಮಾರ್ಕ್ಸ್‌ವಾದ) ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಭಾರತ ಸಂವಿಧಾನದಂತೆ ದೇಶದಾದ್ಯಂತ ಒಕ್ಕೂಟವಾದಿ ಸ್ವರೂಪ ಬಲಗೊಳಿಸಲು ಈಗ ಒಕ್ಕೂಟ ಸರಕಾರ ರಾಜ್ಯ ಸರಕಾರಗಳ ಮೇಲೆ ತನ್ನ ಅಧಿಕಾರ ದುರುಪಯೋಗ ಹಾಗೂ ಹಸ್ತ ಕ್ಷೇಪದ ಮೂಲಕ ಒಕ್ಕೂಟವಾದಿ ಸ್ವರೂಪಕ್ಕೆ ಭಂಗ ಉಂಟು ಮಾಡುವುದನ್ನು ಈ ಕೂಡಲೆ ನಿಲ್ಲಿಸಬೇಕು. ರಾಜ್ಯಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಗಳು ತಮ್ಮ ತೆರಿಗೆ ಹಾಗೂ ಸಂಪನ್ಮೂಲಗಳ ಪಾಲು ಪಡೆಯುವಲ್ಲಿ ಒಕ್ಕೂಟ ಸರಕಾರ ಅಡ್ಡಿಯಾಗಬಾರದು. ಕರ್ನಾಟಕಕ್ಕೆ ಬರಗಾಲದ ಅನುದಾನವನ್ನು ಕೂಡಲೆ ಬಿಡುಗಡೆ ಮಾಡಬೇಕು. ಒಕ್ಕೂಟ ಸರಕಾರ ತನ್ನ ಮನಸ್ಸಿಗೆ ತೋಚಿದಂತೆ ರಾಜ್ಯ ಸರಕಾರಗಳು ಸಾಲ ಪಡೆಯುವಂತೆ ಮಾಡುವುದನ್ನು ನಿಲ್ಲಿಸಬೇಕು. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಕ್ಕೂಟ ಸರಕಾರ ಮಧ್ಯಪ್ರವೇಶ ಮಾಡಬಾರದು. ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಒಕ್ಕೂಟ ಸರಕಾರ ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ವಿಭಾಗಳನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು.

ರಾಜ್ಯ ಸರಕಾರಗಳ ವಿಷಯದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಹಾಗೂ ಅವರ ಸಂವಿಧಾನಾತ್ಮಕ ಸ್ಥಾನದ ದುರುಪಯೋಗ ತಡೆಯಬೇಕು. ರಾಜ್ಯದ ವಿಶ್ವವಿದ್ಯಾಲಯಗಳ ವಿಷಯದಲ್ಲಿ ಕುಲಪತಿಗಳಾಗಿ ರಾಜ್ಯಪಾಲರ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು. ರಾಜ್ಯ ಶಾಸಕಾಂಗ ಅಂಗೀಕರಿಸಿದ ಶಾಸನಗಳನ್ನು ರಾಜ್ಯಪಾಲರು ತಡೆ ಹಿಡಿಯಬಾರದು. ವಿಳಂಬ ಮಾಡದೆ ಸಹಿ ಮಾಡುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಲ.ಜಗನ್ನಾಥ್, ಎನ್.ವಿಜಯ್‌ಕುಮಾರ್, ಮುಖಂಡರಾದ ಜಿ.ರಾಜೇಂದ್ರ, ಬಸವಯ್ಯ, ಅಣ್ಣಪ್ಪ, ಬಾಲಾಜಿ ರಾವ್, ಬಲರಾಮ್, ಪುಟ್ಟಮಲ್ಲಯ್ಯ, ವರುಣ, ನಾಗರಾಜ್, ಚಂದ್ರಶೇಖರ್, ಅನಂತರಾಮ್, ಮಹದೇವಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net