ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ

1
Published on

ಮೈಸೂರು: ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗುವ ಎಪಿಎಂಸಿ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಕೋವಿಡ್-19ನಿಂದಾಗಿ ಕೃಷಿಕರು, ಕಾರ್ಮಿಕರು ಸೇರಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಜನರಿಗೆ ನೆರವಾಗಬೇಕಾದ ಸರ್ಕಾರ, ಖಾಸಗಿ ಕಂಪನಿಗಳಿಗೆ ನೆರವಾಗಲು ಕಾಯ್ದೆ ತಿದ್ದುಪಡಿ ಮಾಡಿದೆ ಎಂದು ದೂರಿದರು.

ಬಂಡವಾಳದಾರರು, ಕಾರ್ಪೊರೇಟ್ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ವಿನಾಯಿತಿ ನೀಡುವ ಮತ್ತು ದುಡಿಮೆ ಸಮಯವನ್ನು 12 ಗಂಟೆಗಳಿಗೆ ವಿಸ್ತರಿಸುವ ಪ್ರಸ್ತಾಪ ಕೈ ಬಿಡಬೇಕು ಹಾಗೂ ವಿದ್ಯುತ್ ಸರಬರಾಜನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ಗ್ರಾಪಂಗಳಿಗೆ ಆಡಳಿತ ಸಮಿತಿ ಸದಸ್ಯರನ್ನು ನೇಮಕ ಮಾಡುವುದನ್ನು ನಿಲ್ಲಿಸಬೇಕು. ಈಗ ಹಾಲಿ ಇರುವ ಚುನಾಯಿತ ಸಮಿತಿಯನ್ನು ಮುಂದುವರಿಸುವುದರ ಜತೆಗೆ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಎಲ್ಲರಿಗೂ 3 ತಿಂಗಳಿಗೆ ಅಗತ್ಯವಾದ ಆಹಾರ ಧಾನ್ಯ ಒದಗಿಸಬೇಕು. ಜತೆಗೆ ಎಲ್ಲರಿಗೂ ಪ್ರತಿ ತಿಂಗಳು ತಲಾ 7500 ರೂ. ನೆರವು ನೀಡುವುದು ಸೇರಿ ಇತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಕೆ. ಬಸವರಾಜು, ಲ. ಜಗನ್ನಾಥ್, ಜಯರಾಂ, ಜಗದೀಶ್ ಸೂರ್ಯ, ವಿಜಯಕುಮಾರ್, ರಾಜೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net