ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯೋಜನೆ ತಡೆಹಿಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಂಡರಿಂದ ಪ್ರತಿಭಟನೆ

Screenshot_2023-08-07-12-29-35-79.jpg
Published on

ಬೆಳಗಾವಿ: ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ 19 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಮುಖಂಡರು ರಸ್ತೆಗಿಳಿದು ಪ್ರತಿಭಟಿಸಿದರು.
ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರಿಗೆ ಪೂರಕವಾಗಿದ್ದ ಬಹುತೇಕ ಯೋಜನೆಗಳನ್ನು ‌ಸರ್ಕಾರ ತಡೆಹಿಡಿದಿದೆ. ಆ ಮೂಲಕ ಕೃಷಿಕರಿಗೆ ಈ ಸರ್ಕಾರ ದೊಡ್ಡ ಮಟ್ಟದ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ‌ದೇಶದ ಬೆನ್ನೆಲುಬು ಎಂದು ಹಲವು ಪಕ್ಷಗಳು ಮಾತನಾಡುತ್ತ ಬಂದಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅನುಕೂಲ ಕಲ್ಪಿಸಲು ಕಿಸಾನ್ ಸನ್ಮಾನ ಯೋಜನೆ ‌ಜಾರಿಗೊಳಿಸಿದರು.
ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ಹಣವನ್ನು ರೈತರ ಖಾತೆಗೆ ಹಾಕುತ್ತಿತ್ತು. ಕೇಂದ್ರದ 6 ಸಾವಿರ ಜತೆಗೆ ಬಿಎಸ್‌ವೈ ಸಿಎಂ ಆಗಿದ್ದಾಗ 4 ಸಾವಿರ ರೂ. ಹೆಚ್ಚುವರಿ ಹಣ ಘೋಷಿಸಿದರು. ಬಿಜೆಪಿ ಘೋಷಿಸಿದ್ದ 4 ಸಾವಿರ ರೂ. ಹಣವನ್ನು ಈ ಸರ್ಕಾರ ತಡೆ ಹಿಡಿದಿದೆ‌. ಸರ್ಕಾರದ ನಿರ್ಧಾರದಿಂದ ರೈತಾಪಿ ವರ್ಗ ಅನ್ಯಾಯಕ್ಕೆ ಒಳಗಾಗಿದೆ ಎಂದು ಸಿಡಿಮಿಡಿಗೊಂಡರು.
ಗ್ಯಾರಂಟಿ ಯೋಜನೆಗಳನ್ನು ‌ನಾವು ಸ್ವಾಗತಿಸುತ್ತೇವೆ, ಬಡವರಿಗೆ ಈ ಎಲ್ಲವೂ ತಲುಪಲಿ. ಬಿಜೆಪಿ ಅವಧಿಯ ಯೋಜನೆಗಳನ್ನು ಮರಳಿ ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ‌ನೀಡಿದರು.
ಮಾಜಿ ಸಚಿವೆ ಶಶಿಕಲಾ ‌ಜೊಲ್ಲೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ್ ಪಾಟೀಲ, ನಿಖಿಲ ಕತ್ತಿ, ಮಾಜಿ ಶಾಸಕ ಅನಿಲ ಬೆನಕೆ ಹಾಗೂ ಉಜ್ವಲಾ ಬಡವನಾಚೆ, ಸಿದ್ದನಗೌಡ ಪಾಟೀಲ, ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು, ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net