

ಇಂಡಿ: ಶಿಕ್ಷಕರನ್ನು ಬಿಎಲ್‌ಒ ಕೆಲಸದಿಂದ ಕೈಬಿಡುವಂತೆ ಆಗ್ರಹಿಸಿ ಪಟ್ಟಣದ ಮಿನಿವಿಧಾನಸೌಧ ಎದುರು ಇಂಡಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಇಂಡಿ ತಾಲೂಕಾ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಧನಪಾಲಶೆಟ್ಟಿ ದೇವೂರ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರಿ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಎಸ್.ಡಿ. ಪಾಟೀಲ ಮಾತನಾಡಿ, ಸುಮಾರು ವರ್ಷದಿಂದ ಶಿಕ್ಷಕರು ಬಿಎಲ್‌ಒ ಕೆಲಸ ನಿರ್ವಹಿಸುತ್ತಿದ್ದರು. ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಶಿಕ್ಷಕರಿಗೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಯೋಜನೆ ಅನುಷ್ಠಾನಗಳ ಹೆಚ್ಚಿನ ಒತ್ತಡ ಇರುತ್ತದೆ. ಹೀಗಾಗಿ ಶಾಲಾ ಕಾರ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತದೆ ಎಂದರು.
ಇಂಡಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಹರಳಯ್ಯ ಮಾತನಾಡಿ, ಜೂನ್‌ದಿಂದ ಸಪ್ಟೆಂಬರ್‌ವರೆಗೆ ಪಾಠ ಬೋಧನೆ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಪ್ರೇರಣಾ ಕಾರ್ಯಕ್ರಮ ಜರುಗುತ್ತಿದ್ದು, ಪೂರ್ಣ ಪ್ರಮಾಣದ ಕಾರ್ಯದಲ್ಲಿ ತೊಡಗಬೇಕಾಗಿದೆ. ಅದಲ್ಲದೆ ಪಾಲಕರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ. ಹೀಗಾಗಿ ಶಿಕ್ಷಕರನ್ನು ಬಿಎಲ್‌ಒ ಕೆಲಸದಿಂದ ಬಿಡುಗಡೆಗೊಳಿಸಲು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಂ.ಆರ್. ಕಟಕದೊಂಡ, ಎನ್.ಎಂ. ನೇದಲಗಿ, ಪಿ.ಜಿ. ಕಲ್ಮನಿ, ಎ.ಟಿ. ಪವಾರ, ವೈ.ಟಿ. ಪಾಟೀಲ, ಸುರೇಶ ಚವ್ಹಾಣ, ಆನಂದ ಕೆಂಬಾವಿ, ಗುರುಮಾತೆಯರಾದ ಎಸ್.ಐ. ಕೋರಿ, ಆರ್.ಕೆ. ಕೋಳಿ ಮತ್ತಿತರಿದ್ದರು.