

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಟಗರಪುರ ಗ್ರಾಮ ಪಂಚಾಯಿತಿ ಮುಂಭಾಗ ಮಂಗಳವಾರ ಆಲಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಟಗರಪುರ ಗ್ರಾ.ಪಂ ವ್ಯಾಪ್ತಿಯ ಆಲಹಳ್ಳಿಯಲ್ಲಿ ಕಳೆದ 1 ತಿಂಗಳಿನಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನೆಕಾರರು ಅಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟಿಸುತ್ತಿದ್ದರೂ ಪಿಡಿಒ ಮಲ್ಲೇಶ್ ಕಚೇರಿಯಿಂದ ಹೊರಬಂದು ಪ್ರತಿಭಟನಾಕಾರರ ಬೇಡಿಕೆ ಆಲಿಸದ ಕಾರಣ ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು.
ವಿಚಾರ ತಿಳಿದ ತಹಸೀಲ್ದಾರ್ ಮಂಜುಳಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಬರುವವರೆಗೆ ಕಾಯಿರಿ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಆಶ್ವಾಸನೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಆಲಹಳ್ಳಿ ಗ್ರಾಮದ ಮಹೇಶ್, ಜಗದೀಶ್, ಅಂಕಪ್ಪ, ಕೂಸಪ್ಪ, ನಾಗ, ನಟರಾಜು, ನಿಂಗಣ್ಣ, ಶಾಂತರಾಜು, ತೋಟದ ಗಿರೀಶ, ಭೋಗಣ್ಣ, ಹುಚ್ಚಾರಾದ್ಯ , ರುದ್ರಪ್ಪ, ಬಸವಣ್ಣ, ನಾಗೇಂದ್ರ ಮತ್ತಿತರರಿದ್ದರು.