

ಮಂಡ್ಯ: ಆರ್ಥಿಕ ಸೃದೃಢವಾಗುತ್ತಿರುವ ಭಾರತಕ್ಕೆ ಹಿನ್ನಡೆ ಉಂಟುಮಾಡುವ ಸಲುವಾಗಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಅಧಿಕ ಸುಂಕ ವಿಧಿಸುತ್ತಿರುವ ವಿದೇಶಿ ಕಂಪನಿಗಳ ವಿರುದ್ಧ ನಗರದಲ್ಲಿ ಸ್ವದೇಶಿ ಜಾಗರಣ ಮಂಚ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮೈಸೂರು ವಿಭಾಗ ಸಂಯೋಜಕ ಸಿದ್ದರಾಜು ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಅಮೆರಿಕಾ ಮತ್ತು ಚೀನಾ, ಟರ್ಕಿ ಸೇರಿದಂತೆ ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ಮಾರುಕಟ್ಟೆ ಮಾಡಲು ಹೊರಟಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಬದಲಿಗೆ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸಿ ಭಾರತದ ಉತ್ಪನ್ನಗಳನ್ನೇ ಮಾರಾಟ ಮಾಡಲು ಹೆಚ್ಚು ಅವಕಾಶ ಮಾಡಿಕೊಡಬೇಕು. ಶಸ್ತ್ರಾಸ್ತ್ರಗಳಿಂದಿಡಿದು ಎಲ್ಲವನ್ನೂ ನಮ್ಮಲ್ಲೇ ಉತ್ಪಾದನೆ ಮಾಡಬೇಕು. ವಿದೇಶಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಬಿಡಬಾರದು ಎಂದು ಒತ್ತಾಯಿಸಿದರು.
ಪ್ರಸ್ತುತ ಜಾಗತಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಸನ್ನಿವೇಶವು ಸವಾಲಿನದ್ದಾಗಿದೆ. ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯ, ಆಪರೇಷನ್ ಸಿಂಧೂರ ಮತ್ತು ಆ ಸಂದರ್ಭದಲ್ಲಿ ವಿಶ್ವದ ಇತರೆ ದೇಶಗಳ ಪರಿಸ್ಥಿತಿ ಭಾರತಕ್ಕೆ ತನ್ನ ಆರ್ಥಿಕ, ರಾಜತಾಂತ್ರಿಕ ಮತ್ತು ವಿಶ್ವ ಸಂಬಂಧಗಳನ್ನು ಮರು ವ್ಯಾಖ್ಯಾನಿಸಲು ಅವಕಾಶವನ್ನು ನೀಡಿದೆ. ಚೀನಾ, ಟರ್ಕಿ ಸೇರಿದಂತೆ ಕೆಲ ದೇಶಗಳು ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳನ್ನು ಬಹಿರಂಗವಾಗಿ ಸಮರ್ಥಿಸುತ್ತಿವೆ. ಯುದ್ಧದಲ್ಲಿ ಪ್ರತ್ಯಕ್ಷವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ. ಇನ್ನೊಂದೆಡೆ ಭಾರತದ ಸ್ನೇಹಿತರಾದ ಅಮೆರಿಕಾ, ಯುರೋಪ್, ರಷ್ಯಾ ಕೂಡ ಭಾರತದ ಪರವಾಗಿ ಸ್ಪಷ್ಟ ಬೆಂಬಲ ನೀಡಲಿಲ್ಲ ಎಂದು ದೂರಿದರು.
ಮತ್ತೊಂದೆಡೆ, ಅದೇ ಚೀನಾದೊಂದಿಗೆ ಪ್ರತಿ ವರ್ಷ 115 ರಿಂದ 116 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರ ಕೊರತೆಯನ್ನು ಅನುಭವಿಸುತ್ತಿದೆ. ಅಂದರೆ ನಮ್ಮ ಮೇಲೆ ದಾಳಿ ಮಾಡುವವರಿಗೆ ನಾವು ಪ್ರತಿ ವರ್ಷ ಇಷ್ಟು ಹಣವನ್ನು ಕಳುಹಿಸುತ್ತೇವೆ. ಇನೋಂದೆಡೆ ಯುರೋಪ್, ಅಮೆರಿಕಾ 1994-95 ರಲ್ಲಿ ವಿಶ್ವ ವ್ಯಾಪಾರ ಒಕ್ಕೂಟವನ್ನು ರಚಿಸಿ, ಇದರಿಂದಾಗಿ ಈ ದೇಶಗಳು ಮತ್ತು ಅವರ ಕಂಪನಿಗಳು ಇಡೀ ಪ್ರಪಂಚದಿಂದ ವ್ಯಾಪಾರ ಮತ್ತು ಹಣವನ್ನು ಸೆಳೆಯಬಹುದು ಎಂದು ಯೋಚಿಸುತ್ತಿವೆ.
ಆದರೆ, ಈಗ ಭಾರತ ಮತ್ತು ಪ್ರಪಂಚದ ಇತರೆ ಕೆಲವು ದೇಶಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ ಬೆಳೆಯಲು ಪ್ರಾರಂಭಿದ್ದಾಗಿ ಅವರು ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಸುಂಕವನ್ನು ಹಾಕುವ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಭಾರತದಲ್ಲಿ ಯಾವುದೇ ಉತ್ಪಾದನೆ ಮಾಡಬಾರದು ಮತ್ತು ಯಾವುದೇ ಕಾರ್ಖಾನೆಗಳನ್ನು ಸ್ಥಾಪಿಸಬಾರದೆಂದು ಕರೆ ನೀಡುತ್ತಿದ್ದಾರೆ. ಚೀನಾ, ಅಮೆರಿಕಾ, ಯುರೋಪ್ ಅಥವಾ ರಷ್ಯಾ ಭಾರತದ ಸ್ವಾಭಿಮಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಬಹಿರಂಗವಾಗಿ ಹತ್ತಿಕ್ಕುವಲ್ಲಿ ತೊಡಗಿವೆ. ಅವರು ತಮ್ಮದೇಯಾದ ರೀತಿಯಲ್ಲಿ ಭಾರತದ ದೊಡ್ಡ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಬಯಸುತ್ತಿದ್ದಾರೆ. ಅವರು ಇಲ್ಲಿ ವ್ಯಾಪಾರ ಮಾಡಲು ಮತ್ತು ಇಲ್ಲಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಣವನ್ನು ಲೂಟಿ ಮಾಡಲು ಬಯಸುತ್ತಿದ್ದಾರೆ ಎಂದು ಆರೋಪಿಸಿದರು.
ವಾಸ್ತವವಾಗಿ ಭಾರತದ ವಿರುದ್ಧ ಆರ್ಥಿಕ ಯುದ್ಧದ ಘೋಷಣೆಯಾಗಿದೆ. ಅವರು ಈಗ ನೇರವಾಗಿ ಯುದ್ಧದಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದು, ಈ ವಿಶ್ವ ವ್ಯಾಪಾರ ಯುದ್ಧದ ಆಟಗಾರರಾಗಿ ರಣಾಂಗಣಕ್ಕೆ ಇಳಿದಿದ್ದಾರೆ. ಅವರು ಆಟಿಕೆ, ಪ್ರತಿಮೆ, ಶಸ್ತ್ರಾಸ್ತ್ರಗಳಿಂದ ಹಿಡಿದು ವಿಮಾನಗಳವರೆಗೂ ಎಲ್ಲವನ್ನೂ ಭಾರತದಲ್ಲಿ ಮಾರಾಟ ಮಾಡಲು ಬಯಸುತ್ತಿದ್ದಾರೆ. ಭಾರತದ ಬೃಹತ್ ಮಾರುಕಟ್ಟೆಯ ಮೇಲೆ ಅವರು ರಣಹದ್ದಿನ ಕಣ್ಣಿಟ್ಟಿದ್ದಾರೆ. ಇದರಿಂದ ದೇಶವನ್ನು ಉಳಿಸಬೇಕು ಮತ್ತು ಈ ಆರ್ಥಿಕ ಯುದ್ಧದಲ್ಲೂ ಭಾರತವನ್ನು ವಿಜಯಶಾಲಿಯನ್ನಾಗಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚಂದ್ರಶೇಖರ್, ಜಗದೀಶ್, ಜೋಗಿಗೌಡ, ರಾ.ಶಿ.ಸಿದ್ದರಾಜುಗೌಡ, ಕೃಷ್ಣಶೆಟ್ಟಿ, ಮಲ್ಲಣ್ಣ, ಜಯರಾಮು, ವೆಂಕಟೇಶ್, ನಿತ್ಯಾನಂದ ಇತರರಿದ್ದರು.