

ಧಾರವಾಡ: ಕಾಂಗ್ರೆಸ್ ಮುಖಂಡ ಹಾಗೂ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಶಾಸಕ ವಿನಯ ಕುಲಕರ್ಣಿ ನಿವಾಸಕ್ಕೆ ಸೋಮವಾರ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಇದ್ದು, ಪ್ರತಿಭಟನೆಗೆ ಅವಕಾಶ ಇಲ್ಲ ಎಂದ ಉಪನಗರ ಠಾಣೆ ಪೊಲೀಸರು, ಎಚ್ಚರಿಕೆ ನೀಡಿ ಪ್ರತಿಭಟನಾಕಾರರನ್ನು ಚದುರಿಸಿದರು.
ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ನಮ್ಮ ನಾಯಕರ ಬಳಿ ನ್ಯಾಯ ಕೇಳಲು ಬಂದಿದ್ದೇವೆ. ಇದು ನಮ್ಮ ಹಕ್ಕು ಎಂದು ಪ್ರತಿಭಟನಾಕಾರರು ವಾಗ್ವಾದಕ್ಕೆ ಇಳಿದರು. ಪ್ರತಿಭಟನೆ ಹಾಗೂ ಮುತ್ತಿಗೆ ಹಾಕಲು ಜೂ. 5ರವರೆಗೆ ಅವಕಾಶವಿಲ್ಲ ಎಂದ ಪೊಲೀಸರು, ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಮುಸ್ಲಿಂ ಸಮಾಜ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತ ಬಂದಿದೆ. ಆದರೆ, ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕ ಭಾಗದ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ ಕಡೆಗಣನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ತೆರಳಿದರು.