

ಹಾಸನ: ರಾಜ್ಯದ ಕಾಂಗ್ರೆಸ್ ಸರ್ಕಾರವು ‘ಸಂಯೋಜನೆ’ ಹೆಸರಿನಲ್ಲಿ ರಾಜ್ಯದ 4,200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಈ ನಡೆಯನ್ನು ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರಾದ ಸುಷ್ಮಾ ಮಾತನಾಡಿ, ಕಡಿಮೆ ಹಾಜರಾತಿ ಇರುವ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜನೆಗೊಳಿಸುವುದಾಗಿ ಸರ್ಕಾರವು ತಿಳಿಸಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. 4 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ಈ ನಡೆಯನ್ನು ಎಐಡಿಎಸ್‌ಒ ಖಂಡಿಸುತ್ತದೆ ಎಂದರು.
ಹಿಂದಿನ ಬಿಜೆಪಿ ರಾಜ್ಯ ಸರ್ಕಾರವು ಇದೇ ನೆಪವೊಡ್ಡಿ ಎನ್‌ಇಪಿ-2020ರ ಅಡಿಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಅದರ ವಿರುದ್ಧ ರಾಜ್ಯದ ವಿದ್ಯಾರ್ಥಿಗಳು ಬೃಹತ್ ಆಂದೋಲನ ನಡೆಸಿ 35 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸುವುದರ ಮೂಲಕ ಶಾಲೆಗಳನ್ನು ರಕ್ಷಿಸಿದ್ದರು. ಆದರೆ, ಈಗ ಮತ್ತೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮುಖಾಂತರ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತ ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ವಿಶ್ವಾಸ ದ್ರೋಹವೆಸಗಿದೆ. ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ. ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಮುಚ್ಚುವುದು, ನೆಗಡಿ ಬಂದರೆ ಮೂಗು ಕತ್ತರಿಸಿದಂತೆ. ಸರ್ಕಾರವು ತನ್ನ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನವಿರೋಧಿ ನಿರ್ಧಾರವನ್ನು ಕೈಬಿಡಬೇಕು ಹಾಗೂ ಕೂಡಲೇ ಹಾಜರಾತಿ ಕಡಿಮೆಯಿರುವ ಶಾಲೆಗಳಿಗೆ ಅವಶ್ಯಕ ಸೌಲಭ್ಯಗಳನ್ನು ನೀಡಿ ರಕ್ಷಿಸಬೇಕೆಂದು ಎಐಡಿಎಸ್‌ಒ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಹ ಸಂಚಾಲಕಿ ಚೈತ್ರಾ, ರಾಜ್ಯ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಿತಿನ್, ಜಿಲ್ಲಾ ಕಾರ್ಯಕರ್ತರಾದ ಸುಷ್ಮಾ, ಪುರುಷೋತ್ತಮ್, ಮಮತಾ, ಶಾಮಲಾ, ಮೋಹನ್, ರಾಹುಲ್, ನವೀನ್, ವೀರೇಶ್, ನಾಗಶ್ರೀ ಹಾಗೂ ವಿವಿಧ ಕಾಲೇಜಿನ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.