

ಕೊಳ್ಳೇಗಾಲ: ಕೆಎಸ್‌ಆರ್‌ಟಿಸಿ ಬಸ್‌ಗಳು ಸತ್ತೇಗಾಲ ಹಾಗೂ ಹ್ಯಾಂಡ್‌ಪೋಸ್ಟ್ ಗ್ರಾಮದೊಳಗೆ ಪ್ರವೇಶಿಸದೆ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೋಮವಾರ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸತ್ತೇಗಾಲ ಹಾಗೂ ಹ್ಯಾಂಡ್‌ಪೋಸ್ಟ್ ಗ್ರಾಮದ ನಡುವೆ ಹಾದು ಹೋಗಿರುವ ಬೈಪಾಸ್ ರಸ್ತೆಯಲ್ಲಿ ಸಮಾವೇಶಗೊಂಡ ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ತಡೆದು ಅಕ್ರೋಶ ಹೊರಹಾಕಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳು ಬೈಪಾಸ್ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಈ ಎರಡೂ ಗ್ರಾಮದಿಂದ ಓದಲು ತೆರಳುವ ವಿದ್ಯಾರ್ಥಿಗಳ ಸಂಕಷ್ಟಕ್ಕೀಡಾಗಿದ್ದಾರೆ. ಮಳ್ಳವಳ್ಳಿ ಹಾಗೂ ಕೊಳ್ಳೇಗಾಲದ ಕಡೆಗೆ ಕೂಲಿ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಬಸ್‌ಗಳು ಗ್ರಾಮದೊಳಗೆ ಬಾರದೆ ಬೈಪಾಸ್ ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಸಂಬಂಧ ಸಾರಿಗೆ ಸಚಿವರಿಗೂ ದೂರು ನೀಡಲಾಗಿದೆಯಾದರೂ ಕ್ರಮವಾಗಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಏಕೆ ಗ್ರಾಮದೊಳಗೆ ಬಿಡದೆ ಬೈಪಾಸ್ ರಸ್ತೆಯಲ್ಲಿಯೇ ತೆರಳುತ್ತಿದ್ದೀರಿ ಎಂದು ಚಾಲಕರ ಹಾಗೂ ನಿರ್ವಾಹಕರನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದರಲ್ಲದೆ, ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ರಸ್ತೆಯಲ್ಲಿಯೇ ಕೂರುವುದಾಗಿ ಪಟ್ಟು ಹಿಡಿದರು.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಹಾಗೂ ಕ್ರೈಂ ಪಿಎಸ್‌ಐ ಚೆಲುವರಾಜ್ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಬಳಿಕ ಕೊಳ್ಳೆಗಾಲ ಘಟಕದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಭೋಗನಾಯಕ ಆಗಮಿಸಿ ವಿದ್ಯಾರ್ಥಿಗಳ ದೂರು ಆಲಿಸಿದರು.
ಗ್ರಾಮದೊಳಗೆ ಬಸ್ ಬಾರದೆ ಕಾಲೇಜಿಗೆ ತೆರಳಲು ತೊಂದರೆಯಾಗಿದೆ. ರಾತ್ರಿ ವೇಳೆಯೂ ಬೈಪಾಸ್ ರಸ್ತೆಯಲ್ಲಿಯೇ ನಿಲ್ಲಿಸುವುದರಿಂದ ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿ ಯಶ್ವಂತ್‌ಗೌಡ ದೂರಿದರು. ಡಿಪೋ ಮ್ಯಾನೇಜರ್ ಮಾತನಾಡಿ, ಇನ್ಮುಂದೆ ಸತ್ತೇಗಾಲ ಗ್ರಾಮ ಹಾಗೂ ಹ್ಯಾಂಡ್ ಪೋಸ್ಟ್ ಗ್ರಾಮದೊಳಗೆ ಬಸ್ ತೆರಳುವ ಸಂಬಂಧ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಯಶ್ವಂತ್ ಗೌಡ, ವರ್ಷಿತ್, ರಘು, ಮನೋಜ್, ಚಂದನ್, ಸಂಜಯ್, ಸಿದ್ದೇಶ್, ಕಿಶೋರ್ ಗೌಡ, ಡಾ.ಬಿ.ಆರ್.ಅಂಬೇಡ್ಕರ್ ಸತ್ಯಾದ್ರಿ ಯುವಕರ ಸಂಘದ ಅಧ್ಯಕ್ಷ ಅವಿನಾಶ್, ಉಪಾಧ್ಯಕ್ಷ ಬೈರ, ಖಜಾಂಚಿ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಲಿಂಗರಾಜು, ರೈತ ಮುಖಂಡ ಭಾಸ್ಕರ್, ಮುಖಂಡ ಶಿವಶಂಕರ್, ದಿವ್ಯಕುಮಾರ್, ಪ್ರದೀಪ್, ಶಶಿಕುಮಾರ್, ಪ್ರಭುಸ್ವಾಮಿ, ಸಿದ್ದರಾಜು, ಶಾಂಯರಾಜು ಮತ್ತಿತರಿದ್ದರು. ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ) ಸಂಘಟನೆ ಶಬೀರ್ ಪಾಷ, ಮಹಮ್ಮದ್ ಇರ್ಫಾನ್ ಮತ್ತಿತರರಿದ್ದರು.