

ಮೈಸೂರು: ಕೂಲಿ ಏರಿಕೆ ಮಾಡುವಂತೆ ಒತ್ತಾಯಿಸಿ ಸೋಮವಾರ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದಿಂದ ಪಡಿತರ ಧಾನ್ಯಗಳ ಎತ್ತುವಳಿ ಕೆಲಸ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ನಗರದ ಬನ್ನಿಮಂಟಪದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯ ಲೋಡಿಂಗ್, ಅನ್‌ಲೋಡಿಂಗ್ ಮಾಡುವವರ ಕೂಲಿ ನಿಗದಿ ಮಾಡಿ ಐದು ವರ್ಷಗಳೇ ಕಳೆದಿವೆ. ಆದರೆ, ಈ ಬಳಿಕ ಅಡುಗೆ ಅನಿಲ ಇನ್ನಿತರ ಅಗತ್ಯ ವಸ್ತುಗಳ ದರ ಏರಿದೆ. ಆದರೂ ಸರ್ಕಾರ ಇವರ ಕೂಲಿ ಹೆಚ್ಚಳ ಮಾಡಿಲ್ಲ. ಕಳೆದ 5 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ಗುತ್ತಿಗೆ ಕಾರ್ಮಿಕ ಕಾಯ್ದೆಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. 2018ರಲ್ಲಿ ಕ್ವಿಂಟಾಲ್‌ಗೆ 16 ರೂ. ನಿಗದಿ ಮಾಡಿರುವುದೇ ಕೊನೆ. ಬಳಿಕ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಮಾಲಿ ಕಾರ್ಮಿಕರಿಗೆ ಗ್ರಾಮಾಂತರ ಸಾಗಣೆ ಟೆಂಡರ್‌ನಲ್ಲಿ ನಮೂದಿಸಿರುವ ನಿಯಮಾವಳಿಗಳನ್ನು ಇದುವರೆಗೂ ಪಾಲಿಸಿಲ್ಲ. ಕೂಲಿ ದರಕ್ಕೆ ಅನುಗುಣವಾಗಿ ವೇತನ ನಿಡುತ್ತಿಲ್ಲ. ಅದಕ್ಕನುಗುಣವಾಗಿ ಇಎಸ್‌ಐ ಮತ್ತು ಪಿಎಫ್ ಪಾವತಿಸುತ್ತಿಲ್ಲ. ಹೀಗಾಗಿ ಕೂಡಲೇ ಸರ್ಕಾರದ ಕೂಲಿ ಹೆಚ್ಚಳ ಮಾಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು
ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಕರಿನಾಯಕ, ನರಸಿಂಹಮೂರ್ತಿ, ಗೋವಿಂದರಾಜು, ಚೆಲುವರಾಜು, ಮಹದೇವ್, ಎನ್.ಸಿ.ಕುಮಾರ್ ಇತರರು ಇದ್ದರು.