ರಾಜ್ಯ ರೈತ ಸಂಘದಿಂದ ಪ್ರತಿಭಟನೆ

ರಾಜ್ಯ ರೈತ ಸಂಘದಿಂದ ಪ್ರತಿಭಟನೆ
Published on

ಕೊಳ್ಳೇಗಾಲ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಕೃಷಿ ಮಾರುಕಟ್ಟೆ ಆವಣರದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಮುಖ ರಸ್ತೆಗಳಲ್ಲಿ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶಗೊಂಡರು.

ಈ ಸಂದರ್ಭ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಶ್ರೀ ಕಂಠಸ್ವಾಮಿ ಮಾತನಾಡಿ, ಸತ್ತೇಗಾಲ ಗ್ರಾಮದ ಸ.ನಂ.174 ರಲ್ಲಿ ಅನೇಕ ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಹೊಸ ಬೋರ್‌ವೆಲ್ ತೆಗೆಯಲು, ಗಿಡನೆಡಲು ಅವಕಾಶ ನೀಡುತ್ತಿಲ್ಲ. ಅಲ್ಲದೆ, ಗ್ರಾ.ಪಂ.ಗೆ ಯಾವುದೇ ಅಭಿವೃದ್ಧ್ದಿ ಕೆಲಸ ಮಾಡದಂತೆ ನೋಟಿಸ್ ನೀಡಿದ್ದಾರೆ. ದೊಡ್ಡಿಂದುವಾಡಿ ಭಾಗದ ಬಡ ಜನರಿಗೆ ಕಂದಾಯ ಇಲಾಖೆಯಿಂದ ಇಕ್ಕಡಹಳ್ಳಿಯಲ್ಲಿ ಭೂಮಿ ನೀಡಲಾಗಿತ್ತು. ಆದರೀಗ, ಈ ಜಾಗ ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆದಿದೆ. ಇದನ್ನು ರದ್ದು ಮಾಡಿ ಈ ಜಾಗವನ್ನು ಬಡಜನರ ಉಪಯೋಗಕ್ಕೆ ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕೆಳ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಭೇಟಿ ನೀಡಿ, ರೈತರ ಸಮಸ್ಯೆಗಳ ಆಲಿಸುವ ನಿಟ್ಟಿನಲ್ಲಿ ಇನ್ನು ಮೂರು ದಿನದಲ್ಲಿ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಪಸಂರಕ್ಷಣಾ ಅಧಿಕಾರಿ ಸಭೆ ಕರೆಯಲಿದ್ದಾರೆ. ರೈತರು ತಮ್ಮ ಸಮಸ್ಯೆಗಳನ್ನು ಅಲ್ಲಿ ಚರ್ಚಿಸುವಂತೆ ತಿಳಿಸಿದರು. ಈ ಹಿನ್ನೆಲೆ ಪ್ರತಿಭಟನೆಯನ್ನು ರೈತರು ತಾತ್ಕಾಲಿಕ ಕೈಬಿಟ್ಟರು. ಅರಣ್ಯ ಇಲಾಖೆ ಎಸಿಎಫ್ ಶಶಿಧರ್, ಆರ್‌ಎಫ್‌ಓ ಭರತ್ ಇದ್ದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ಪೆರೆಯಾ ನಾಯಗಂ, ಉಪಾಧ್ಯಕ್ಷ ಚಾರ್ಲಿ, ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಜಿಲ್ಲಾ ಕಾರ್ಯದರ್ಶಿ ಭಾಸ್ಕರ್, ಉಪಾಧ್ಯಕ್ಷ ಗೌಡೇಗೌಡ, ಲೋಕೇಶ್, ಯಶವಂತ್, ವಸಂತ್ ಕುಮಾರ್, ಮಹದೇವು, ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಾದಮ್ಮ, ಜಪಮಾಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net