

ಮೈಸೂರು: ಪ್ರಾಣಿ, ಪಕ್ಷಿಗಳ ಮೇಲೆ ನಡೆಯುತ್ತಿರುವ ಮನುಷ್ಯರ ದೌರ್ಜನ್ಯ ಖಂಡಿಸಿದ ವೇಗನ್ಸ್ ಆಫ್ ಮೈಸೂರು ತಂಡದ ಸದಸ್ಯರು ಪಂಜರದೊಳಗೆ ಕುಳಿತುಕೊಳ್ಳುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ನಗರದ ಚಿಕ್ಕಗಡಿಯಾರ ವೃತ್ತದ ಮುಂಭಾಗ ಪಂಜರದ ಒಳಗೆ ಕುಳಿತುಕೊಳ್ಳುವ ಮೂಲಕ ಮಾಂಸ ಬಳಕೆ, ಚರ್ಮದ ವಸ್ತು, ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಗಾಗಿ ಪ್ರಾಣಿ, ಪಕ್ಷಿಗಳನ್ನು ಮಾನವ ಬಲಿ ನೀಡುತ್ತಿದ್ದಾನೆ. ಮಾನವನ ಅವಾಂತರದಿಂದ ಕಾಡಿಗೆ ಬೆಂಕಿ ಬಿದ್ದು ಅನೇಕ ಜೀವಗಳು ಮರಣವನ್ನಪ್ಪಿದ್ದೂ ಇದೆ ಎಂದು ದೂರಿದರು.
ತಾನು ಜೀವಿಸಲು ಹಾಗೂ ತಮಗೆ ಅನುಕೂಲಕರ ವಾತಾವರಣ ಸೃಷ್ಟಿಸಿಕೊಳ್ಳುವ ಸಲುವಾಗಿ ಪ್ರಾಣಿಗಳ ವಾಸಸ್ಥಳವನ್ನು ವಶಪಡಿಸಿಕೊಳ್ಳುವ ಮನುಷ್ಯ ಆಹಾರಕ್ಕಾಗಿ ಅವನ್ನು ಬೇಟೆಯಾಡಿ ತಿನ್ನುತ್ತಾನೆ. ಬೇಟೆ ತಡೆಯಲು ಅನೇಕ ಕಾನೂನು ಬಂದರೂ ಈ ರೀತಿಯ ಪ್ರಕರಣ ಮರುಕಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಣಿಗಳಿಂದ ತಯಾರಿಸಿದ ವಸ್ತುಗಳ ವ್ಯವಹಾರ ನಿಷೇಧಿಸಬೇಕು. ಪ್ರಾಣಿಗಳಿಗೂ ಪ್ರಾತಿನಿಧ್ಯದ ಹಕ್ಕು ನೀಡಬೇಕು. ಅವುಗಳಿಗೂ ಮನುಷ್ಯನಿಗೆ ನೀಡಿದಂತೆ ಹಕ್ಕು ದೊರೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಈ ಹೋರಾಟ ಮಾಡುತ್ತಿದ್ದೇವೆ. ಮಾನವನು ತನ್ನ ಕ್ರೂರತೆಯಿಂದ ಹೊರಬಂದು ಇತರ ಪ್ರಾಣಿಗಳನ್ನೂ ಪ್ರೀತಿಸಲಿ ಎಂದು ಆಗ್ರಹಿಸಿದರು.
ತಂಡದ ಸದಸ್ಯರಾದ ಅನುರಾಗ್, ಸ್ಟೀವ್, ಅಭಿಷೇಕ್, ಅಜ್ಜರ್, ತಲೈಅರಸನ್, ಜೀವನ್, ವರುಣ್ ಇದ್ದರು.