ಎಸ್‌ಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ

24kgl1- (1)
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಕೊಳ್ಳೇಗಾಲದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದರು.
Published on

ಕೊಳ್ಳೇಗಾಲ: ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ಭಾನುವಾರ ಪ್ರತಿಭಟನೆ ನಡೆಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅವೈಜ್ಞಾನಿಕವಾದದ್ದು. ರಾಜ್ಯದಲ್ಲಿ ಬರ ಎದುರಾಗಿದ್ದು ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಇದರಿಂದ ವ್ಯವಸಾಯಕ್ಕೆ ನೀರಿನ ಲಭ್ಯತೆ ಇರುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಆತ್ಮಹತ್ಯೆ ಮಾಡಿಕೊಂಡಂತೆಯೇ ಸರಿ ಎಂದರು.

ಸಂಕಷ್ಟದ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟು ಪ್ರದರ್ಶಿಸ ಬೇಕಾಗಿದೆ. ದುರಂತ ಎಂದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾವೇರಿ ವಿಷಯದಲ್ಲಿ ತಮ್ಮ ಕುತಂತ್ರ ರಾಜಕಾರಣ ಮಾಡುತ್ತದೆಯೇ ಹೊರತು ನಿಲುವು ವ್ಯಕ್ತಪಡಿಸುವುದಿಲ್ಲ ಎಂದು ಆರೋಪಿಸಿದರು.

ರೈತ ಮುಖಂಡ ಗೌಡೇಗೌಡ ಮಾತನಾಡಿ, ಕಾವೇರಿ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ನಗರ ಘಟಕದ ಅಧ್ಯಕ್ಷ ಜಾಕೀರ್ ಪಾಷ, ಕಾರ್ಯದರ್ಶಿ ಇಮ್ರಾನ್ ಟಿಪ್ಪು, ಉಪಾಧ್ಯಕ್ಷ ಸೈಯದ್ ಮುಜಮೀಲ್, ಮುಖಂಡರಾದ ಕಲೀಲ್ ಆಹಮ್ಮದ್, ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲು, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಸಹ ಸಂಘಟನಾ ಕಾರ್ಯದರ್ಶಿ ಎ.ಅಬ್ಜಲ್, ಇರ್ಫಾನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net