ಆಕ್ಸಿಜನ್ ಸಂತ್ರಸ್ತರಿಗೆ ಉದ್ಯೋಗ ನೀಡುವಂತೆ ಆಗ್ರಹ

10rajesh1
ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಭಾಸ್ಕರ್ ಪ್ರಸಾದ್, ಸಿ.ಎಂ.ಕೃಷ್ಣಮೂರ್ತಿ, ನಮ್ಮನೆ ಪ್ರಕಾಶ್, ಬಂಗಾರ ಸ್ವಾಮಿ, ಸುಂದರ್ ಕಲಿವೀರ್, ಮಹೇಂದ್ರ, ರಾಮಸಮುದ್ರ ಸುರೇಶ್, ಅಬ್ರಾರ್ ಅಹಮ್ಮದ್, ಎಂ.ಮಹೇಶ್, ಕಲೀಲ್ ಉಲ್ಲಾ ಇದ್ದರು.
Published on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಜಾತಿ ಗಣತಿ ಜಾರಿಯಾಗಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಲಕ್ಷ್ಯವೇ ಆಕ್ಸಿಜನ್ ದುರಂತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. 4 ವರ್ಷವಾದರೂ ಉದ್ಯೋಗ ನೀಡಿಲ್ಲ. ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಆಕ್ಸಿಜನ್ ಸಂತ್ರಸ್ತರಿಗೆ ಕಾಯಂ ಸರ್ಕಾರಿ ಉದ್ಯೋಗ ಘೋಷಿಸದಿದ್ದರೆ, ಸಿದ್ದರಾಮಯ್ಯ ಸಮಾವೇಶಕ್ಕೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಂದೆಡೆ ಇಡೀ ದೇಶದಲ್ಲಿ ಜಾತಿ ಗಣತಿ ಜಾರಿಯಾಗಬೇಕು ಎಂದು ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿರುವ ಜಾತಿಗಣತಿ ಜಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿದೆ. ದಲಿತರು ಮತ್ತು ಮುಸ್ಲಿಂ ರಾಜಕೀಯ ಸ್ಥಿತ್ಯಂತರ ಆಗುವುದಕ್ಕೆ ಜಾತಿಗಣತಿ ಕೂಡಲೇ ಜಾರಿಯಾಗಬೇಕು. ಈ ಬಾರಿಯ ಸಚಿವ ಸಂಪುಟದಲ್ಲಾದರೂ ಈ ಕುರಿತು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣಕ್ಕೆ ಶೇ.4ರಷ್ಟು ಮೀಸಲಾತಿ ಜಾರಿಗೊಳಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ 2ಬಿ ಮೀಸಲಾತಿಯನ್ನು ಕಿತ್ತುಕೊಂಡಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ 2ಬಿ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್‌ನವರು ಇಂದಿಗೂ ಜಾರಿಗೊಳಿಸಿಲ್ಲ ಎಂದು ದೂರಿದರು.

ಚಿತ್ರನಟ ಚೇತನ್ ಮಾತನಾಡಿದರು. ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ದಲಿತ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ, ಕನ್ನಡ ಪರ ಹೋರಾಟಗಾರ ನಮ್ಮನೆ ಪ್ರಕಾಶ್, ಬಂಗಾರ ಸ್ವಾಮಿ, ಸುಂದರ್ ಕಲಿವೀರ್, ಮಹೇಂದ್ರ, ರಾಮಸಮುದ್ರ ಸುರೇಶ್, ನಗರಸಭಾ ಸದಸ್ಯರಾದ ಅಬ್ರಾರ್ ಅಹಮ್ಮದ್, ಎಂ.ಮಹೇಶ್, ಕಲೀಲ್ ಉಲ್ಲಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net