

ಮದ್ದೂರು: ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಕೊಪ್ಪದಲ್ಲಿ ಮದ್ದೂರು-ನಾಗಮಂಗಲದ ಮಾರ್ಗ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಜಲಾಶಯದಲ್ಲಿ ನೀರು ಇಲ್ಲದಿದ್ದರೂ ರಾಜ್ಯ ಸರ್ಕಾರ ರೈತ ಹಿತ ಮರೆತು ನಿರಂತರವಾಗಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಜಲಾಶಯದಿಂದ ನೀರನ್ನು ತಮಿಳುನಾಡಿಗೆ ಹರಿಸುತ್ತಿದೆ. ಒಂದು ವೇಳೆ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಲಿದೆ. ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಸಿನಿಮಾ ನಟರು, ಕಿರುತೆರೆ ಕಲಾವಿದರು ಕಾವೇರಿ ಹೋರಾಟದ ಬಗ್ಗೆ ಮಾತನಾಡದಿರುವುದು ನಾಚಿಕೆಗೇಡಿನ ಸಂಗತಿ. ಈ ಕೂಡಲೇ ಅವರು ಬೀದಿಗಿಳಿದು ಹೋರಾಟ ಮಾಡದಿದ್ದರೆ ಅವರ ಚಿತ್ರಗಳನ್ನು ನಿಷೇಧಿಸಲಾಗುವುದು. ಧಾರಾವಾಹಿಗಳನ್ನು ವೀಕ್ಷಿಸದಂತೆ ಕೇಬಲ್ ಕಡಿತ ಮಾಡಲಾಗುವುದು ಎಂದು ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಎಚ್ಚರಿಕೆ ನೀಡಿದರು.
ಚನ್ನೇಗೌಡ, ಅಪ್ಪಾಜಿ, ಮಹಮದ್ ಇಲಿಯಾಜ್, ನವೀನ, ಮಹದೇವ, ರಾಮಕೃಷ್ಣ, ಉಮೇಶ್, ರಾಮೇಗೌಡ, ಶಿವರಾಮು, ಚಂದ್ರ, ರಾಜೇಶ್, ವೆಂಕಟೇಶ್ ಇದ್ದರು.