ಶಾಲೆಗುಡ್ಡೆ ಕಾಲನಿ ನಿವಾಸಿಗಳ ಪರದಾಟ

YLP WATER
Published on

ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗಾರಿನ ಶಾಲೆಗುಡ್ಡೆ ಕಾಲನಿಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೂವರೆ ಕಿಮೀ ದೂರದಿಂದ ನೀರನ್ನು ಹೊತ್ತು ತರಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.

ರಾಜಕೀಯ ದ್ವೇಷದ ಕಾರಣದಿಂದ ಜೀವಜಲ ಸರಬರಾಜು ಸ್ಥಗಿತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಶಾಲೆಗುಡ್ಡೆ ಕಾಲನಿ ಜನ ಸಮಯಕ್ಕೆ ಸರಿಯಾಗಿ ನೀರಿನ ತೆರಿಗೆ ಪಾವತಿಸುತ್ತಾರೆ. ಇಲ್ಲಿನ ಎಲ್ಲ ಮನೆಗಳಿಗೂ ಪಂಚಾಯಿತಿಯಿಂದ ನಲ್ಲಿ ಸಂಪರ್ಕ ನೀಡಲಾಗಿದೆ. ಆದರೆ, ಕಳೆದ ಕೆಲ ತಿಂಗಳಿನಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಹೀಗಾಗಿ ಆ ಭಾಗದ ಜನ ಒಂದೂವರೆ ಕಿಮೀ ದೂರದ ಆಚಾರತಗ್ಗು ಎಂಬ ಪ್ರದೇಶದ ವ್ಯಕ್ತಿಯೊಬ್ಬರ ತೋಟದ ಬಾವಿಯಿಂದ ನೀರು ತರುತ್ತಿದ್ದಾರೆ.

20 ಲಕ್ಷ ರೂಪಾಯಿಗೂ ಅಧಿಕ ಸ್ವಂತ ಸಂಪನ್ಮೂಲ ಹೊಂದಿರುವ ದೇಹಳ್ಳಿ ಗ್ರಾಮ ಪಂಚಾಯಿತಿಗೆ ಕುಡಿಯುವ ನೀರು ಸರಬರಾಜು ಮಾಡುವುದು ದೊಡ್ಡ ಕೆಲಸವೇ ಅಲ್ಲ. ಸ್ಥಳೀಯ ರಾಜಕಾರಣಿಗಳ ದ್ವೇಷದ ಕಾರಣಕ್ಕಾಗಿ ಜನರಿಗೆ ಸಮಸ್ಯೆಯಾಗುತ್ತಿದೆ. ಗ್ರಾಪಂ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಬಣದ ಅಭ್ಯರ್ಥಿಯನ್ನು ಆ ಭಾಗದವರು ಬೆಂಬಲಿಸಿಲ್ಲ ಎಂಬ ಕಾರಣಕ್ಕಾಗಿ ನೀರುಣಿಸದೇ ಸತಾಯಿಸುತ್ತಿದ್ದಾರೆ ಎಂಬುದು ಈಗಿನ ದೂರು. ಪ್ರಸ್ತುತ ಆ ಭಾಗದ ಗ್ರಾಪಂ ಸದಸ್ಯರಾಗಿರುವ ವಿಶ್ವನಾಥ ಹಳೆಮನೆ ಸಹ ಇದೇ ಆರೋಪ ಮಾಡುತ್ತಿದ್ದಾರೆ.

ಶಾಲೆಗುಡ್ಡೆ ಕಾಲನಿಯಲ್ಲಿ ಒಂದು ಬೋರ್‌ವೆಲ್ ಇದ್ದು, ಅದರಲ್ಲಿಯೂ ನೀರಿಲ್ಲ. ಹಲವು ಸಮಯದ ನಂತರ ಕೆಂಪು ಬಣ್ಣದ ಕಲುಷಿತ ನೀರು ಬರುತ್ತಿದೆ. ಕೆಲವರು ಅನಿವಾರ್ಯವಾಗಿ ಅದನ್ನು ಸೇವಿಸಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ’ ಎಂಬುದು ಸ್ಥಳೀಯ ಗ್ರಾ.ಪಂ ಸದಸ್ಯರ ಅಳಲು.

ಆದರೆ, ಯಾವ ರಾಜಕೀಯವೂ ಇಲ್ಲ, ದ್ವೇಷವೂ ಇಲ್ಲ ಎಂಬುದು ಗ್ರಾ.ಪಂ ಅಧ್ಯಕ್ಷ ಶ್ರೀಪತಿ ಹಳೆಮನೆ ಮುದ್ದೆಪಾಲ ಅವರ ಸ್ಪಷ್ಟನೆ. ಕೊಳವೆ ಬಾವಿಯಲ್ಲಿದ್ದ ಪಂಪ್‌ಸೆಟ್ ಹಾಳಾಗಿತ್ತು. ಅದನ್ನು ಮೇಲಕ್ಕೆತ್ತಿ ಸರಿಪಡಿಸುವ ಪ್ರಯತ್ನ ನಡೆದಾಗ, ಸಾಧ್ಯವಾಗದೇ ಹೊಸ ಪಂಪ್‌ಸೆಟ್ ಖರೀದಿಸಿ ಅಳವಡಿಸಲು ಪ್ರಯತ್ನಿಸಲಾಯಿತು. ಆದರೆ, ಮಳೆಯ ಪ್ರಭಾವದಿಂದ ಕೊಳವೆ ಬಾವಿಯ ಒಳಗೆ ಮಣ್ಣು ಕುಸಿದಿರುವುದರಿಂದ ಪಂಪ್ ಇಳಿಸಲು ಸಾಧ್ಯವಾಗಿಲ್ಲ. ಬೋರ್‌ವೆಲ್ ಯಂತ್ರವನ್ನೇ ತರಿಸಿ, ಇನ್ನಷ್ಟು ಆಳಕ್ಕೆ ಕೊರೆಯಿಸಿ, ಪಂಪ್ ಇಳಿಸಲು ನಿರ್ಧರಿಸಲಾಗಿದೆ. ತಿಂಗಳುಗಳ ಹಿಂದೆಯೇ ನಿರ್ಣಯವಾಗಿದ್ದರೂ, ಅಕಾಲಿಕ ಮಳೆಯ ಕಾರಣ ಮಣ್ಣು ರಸ್ತೆಯಲ್ಲಿ ಬೋರ್‌ವೆಲ್ ಯಂತ್ರದ ವಾಹನ ಹೋಗುವುದು ಕಷ್ಟ. ಆ ಕಾರಣಕ್ಕಾಗಿ ಕಾಯಲಾಗುತ್ತಿದೆ. 2-3 ದಿನಗಳಲ್ಲಿ ಯಂತ್ರವನ್ನು ತರಿಸಿ ಸಮಸ್ಯೆ ಪರಿಹರಿಸಲಾಗುವುದು. ಈ ಸಮಸ್ಯೆ ಬಗ್ಗೆ ಸ್ಥಳೀಯರ ಗಮನಕ್ಕೂ ತರಲಾಗಿದೆ. ಸ್ಥಳೀಯ ಗ್ರಾ.ಪಂ ಸದಸ್ಯರು ಈ ಬಗ್ಗೆ ನನ್ನಲ್ಲಿ ಚರ್ಚಿಸಿಲ್ಲ, ಅಧಿಕಾರಿಗಳಲ್ಲೂ ಮಾಹಿತಿ ಕೇಳದೇ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದು ಮುದ್ದೆಪಾಲ ಹೇಳಿದ್ದಾರೆ.

ಡಿ.27ರ ಒಳಗೆ ಶಾಲೆಗುಡ್ಡೆ ಕಾಲನಿಯ ಪ್ರತಿ ಮನೆಗೂ ನೀರು ಸರಬರಾಜು ಆಗುವ ವ್ಯವಸ್ಥೆ ಮಾಡವೇಕು. ಇಲ್ಲದಿದ್ದರೆ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ವಿಶ್ವನಾಥ ಹಳೆಮನೆ, ದೇಹಳ್ಳಿ ಗ್ರಾಪಂ ಸದಸ್ಯ ಇರುವ ಬೋರ್‌ವೆಲ್ ಸರಿಪಡಿಸಿ, ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಹೊರತು, ಯಾವುದೇ ರಾಜಕೀಯದ ಉದ್ದೇಶವಿಲ್ಲ. ಶ್ರೀಪತಿ ಮುದ್ದೆಪಾಲ,ದೇಹಳ್ಳಿ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net