ಕೆಎಚ್‌ಬಿ ಬಡಾವಣೆ ನಿವಾಸಿಗಳ ಪ್ರತಿಭಟನೆ: ಕಾವೇರಿ ನೀರು ಪೂರೈಕೆಗೆ ಆಗ್ರಹ

Protest by residents of KHB Layout Mandya
Published on

ಮಂಡ್ಯ: ಕಾವೇರಿ ನೀರಿಗಾಗಿ ಆಗ್ರಹಿಸಿ ನಗರದ ಕೆಎಚ್‌ಬಿ ಮಹಾರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಬಡಾವಣೆ ನಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಡಾವಣೆಯ ಪಂಚಮುಖಿ ಗಣಪತಿ ದೇವಸ್ಥಾನದ ಬಳಿ ಜಮಾಯಿಸಿದ ನಿವಾಸಿಗಳು, ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಬೈಕ್ ರ‌್ಯಾಲಿ ನಡೆಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿಗೆ ಮನವಿ ಸಲ್ಲಿಸಿದರು.

ಕೆಎಚ್‌ಬಿ ಬಡಾವಣೆ ನಿರ್ಮಾಣ ಮಾಡಿ 20 ವರ್ಷ ಕಳೆದರೂ ಈವರೆಗೂ ಅಲ್ಲಿನ ಜನತೆಗೆ ಕುಡಿಯುವ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. 2019 ರಲ್ಲಿ ಕರ್ನಾಟಕ ಗೃಹಮಂಡಳಿ ನಗರಸಭೆಗೆ ಹಸ್ತಾಂತರ ಮಾಡಿದೆ. ಕಳೆದ 6 ವರ್ಷದಿಂದ ಬಡಾವಣೆ ನಿವಾಸಿಗಳು ಕಂದಾಯ ಕಟ್ಟುತ್ತಿದ್ದಾರೆ. ಆದರೆ, ಈವರೆಗೂ ನಗರಸಭೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ. ಕೆಆರ್‌ಎಸ್ ಜಲಾಶಯದಿಂದ ಬೆಂಗಳೂರಿಗೆ ಸಾವಿರಾರು ಕೋಟಿ ರೂ ವೆಚ್ಚ ಮಾಡಿ ನಿತ್ಯ ನೀರು ಪೂರೈಸಲಾಗುತ್ತಿದೆ. 5ನೇ ಹಂತ ಪೂರ್ಣಗೊಳಿಸಿ 6ನೇ ಹಂತದ ಬಗ್ಗೆ ಯೋಜನೆ ರೂಪಿಸುತ್ತಿದೆ. ಆದರೆ, ನಗರದಲ್ಲಿರುವ ಜನರಿಗೆ ಮಾತ್ರ ಕಾವೇರಿ ನೀರು ಪೂರೈಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ಸುಮಾರು 500 ಕುಟುಂಬ ವಾಸ ಮಾಡುತ್ತಿದ್ದಾರೆ. ಆದರೆ ಬಡಾವಣೆಗೆ ಕುಡಿಯುವ ಕಾವೇರಿ ನೀರು, ಸಮರ್ಪಕ ಒಳಚರಂಡಿ, ಬೀದಿ ದೀಪಗಳು, ರಸ್ತೆಗಳಿಲ್ಲ. ಗಿಡಗೆಂಟೆಗಳು ರಸ್ತೆಗಳಲ್ಲೇ ಬೆಳೆದು ನಿಂತಿದೆ. ಕಂದಾಯ ಕಟ್ಟುವುದಕ್ಕಾದರೂ ನಗರಸಭೆ ಸೌಜನ್ಯಕ್ಕಾದರೂ ರಸ್ತೆಯಲ್ಲಿರುವ ಗಿಡ ಗಂಟೆಗಳನ್ನು ತೆರವುಗೊಳಿಸಲು ಮುಂದಾಗಿಲ್ಲ. ಕಾವೇರಿ ನೀರು ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡುವವರು ಕೊಳವೆ ಬಾವಿ ಕೊರೆಸಿದ್ದಾರೆ. ಆದರೆ, ಆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯುವುದಕ್ಕಿರಲಿ ಸ್ನಾನಕ್ಕೂ ಯೋಗ್ಯವಾಗಿಲ್ಲ. ಈ ಸಂಬಂಧ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಹಾಗೂ ಕೆಎಚ್‌ಬಿ ತಿಕ್ಕಾಟದಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತ್ತು ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಡಾವಣೆಯನ್ನು ಕೆಎಚ್‌ಬಿ ಅವರು 2019 ಅ.15ರಂದು ನಗರಸಭೆಗೆ ಹಸ್ತಾಂತರಿಸಿದರು. ಈ ವೇಳೆ ಬಡಾವಣೆಯ ನಿರ್ವಹಣೆಗಾಗಿ 5.5 ಕೋಟಿ ರೂ ನಗರಸಭೆಗೆ ನೀಡಿತ್ತು. 4.46 ಕೋಟಿ ರೂ ವೆಚ್ಚದಲ್ಲಿ ಕೆಲವೇ ಕೆಲವು ರಸ್ತೆಗಳ ಕಾಮಗಾರಿ ಮಾಡಿದ್ದಾರೆ, ಅದನ್ನು ಹೊರತುಪಡಿಸಿದರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಕೂಡಲೇ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಹಾರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸಿ.ಶ್ರೀಕಾಂತ್, ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಪುಟ್ಟಯ್ಯ, ಕಾರ್ಯದರ್ಶಿ ಅಶೋಕ್, ಸಂಘಟನಾ ಕಾರ್ಯದರ್ಶಿ ಶಶಿಧರ್, ಮೋಹನ್, ಯಶಸ್ವಿನಿ, ಕಾಂತರಾಜು, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net