

ಮೈಸೂರು: ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾಲಯದ ನೂತನ ಸಂಶೋಧನಾ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಮಾನಸ ಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಂಶೋಧನೆಗೆ ಸಂಬಂಧಿಸಿದಂತೆ ಎಸ್‌ಸಿ, ಎಸ್‌ಟಿ ವಿಶೇಷ ಘಟಕದಿಂದ 2021-22ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಸಂಶೋಧಕರಿಗೂ ಶಿಷ್ಯವೇತನ ನೀಡಲಾಗಿದೆ. 2022-23ನೇ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಕರೆದಿಲ್ಲ. ಪ್ರಸ್ತುತ 2023-24ನೇ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಕರೆದಿದ್ದು 39 ಸಂಶೋಧಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಿವಿ 20 ಸಂಶೋಧಕರಿಗೆ ಮಾತ್ರ ಶಿಷ್ಯವೇತನ ನೀಡಿದೆ. ಇದರಿಂದ 19 ಸಂಶೋಧಕರು ಶಿಷ್ಯವೇತನದಿಂದ ವಂಚಿತರಾಗಿದ್ದಾರೆ. ವಿಶ್ವವಿದ್ಯಾಲಯದ ನಿಯಮಾವಳಿಯಂತೆ ವರ್ಷಕ್ಕೆ 20 ಸಂಶೋಧಕರಿಗೆ ಎಂದರೂ ಎರಡು ವರ್ಷಕ್ಕೆ 40 ಸಂಶೋಧಕರಿಗೆ ನೀಡಬೇಕು. ಆದರೆ, ವಿವಿ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದೆ ಎಂದು ಕಿಡಿಕಾರಿದರು.
ಅರ್ಜಿ ಸಲ್ಲಿಸಿದ ಎಲ್ಲ ಎಸ್‌ಸಿ, ಎಸ್‌ಟಿ ಸಂಶೋಧಕರು ಮೂಲತಃ ಗ್ರಾಮೀಣ ಭಾಗದವರಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ 39 ಸಂಶೋಧನಾ ವಿದ್ಯಾರ್ಥಿಗಳಿಗೂ ಶಿಷ್ಯವೇತನ ನೀಡಿ ಸಂಶೋಧನೆಗೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಎಲ್.ಲಿಂಗರಾಜ್, ಪ್ರದೀಪ್, ಶರತ್ ಬಂಡಳ್ಳಿ, ಪ್ರಮೋದ್, ಯೋಗೇಶ್, ಕಿರಣ್‌ಕುಮಾರ್, ಹರೀಶ್, ಚೇತನ್, ಶಂಕರ್, ಸುಬ್ರಹ್ಮಣ್ಯ ಇತರರಿದ್ದರು.