

ಮೈಸೂರು: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲ ಹಿಂದುಳಿದ ವರ್ಗಗಳ (ಒಬಿಸಿ) ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಎದುರು ಪ್ರತಿಭಟನೆ ನಡೆಸಿದ ಸಂಶೋಧನಾ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2024-25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 21 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅನಗತ್ಯ ಷರತ್ತು ವಿಧಿಸಿ 9 ವಿದ್ಯಾರ್ಥಿಗಳ ಅರ್ಜಿ ತಿರಸ್ಕರಿಸಿರುವುದು ಖಂಡನೀಯ ಎಂದರು.
ಮೈಸೂರು ವಿವಿಯಲ್ಲೇ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮೂರು ವರ್ಷ ಶಿಷ್ಯವೇತನ ನೀಡಲಾಗುವುದು. ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪತ್ರ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಹಿಂದಿನ ಮೂರು ವರ್ಷದ ಒಳಗಿರಬೇಕು. 35 ವರ್ಷ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು ಎಂಬ ಅನಗತ್ಯ ಷರತ್ತುಗಳಿಂದ ರಾಜ್ಯದ ಇತರೆ ವಿವಿಗಳಿಂದ ಪದವಿ ಪಡೆದವರಿಗೆ ವಂಚನೆಯಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.
ಶಿಷ್ಯವೇತನವನ್ನು ಮೂರು ವರ್ಷ ನೀಡುವುದರಿಂದ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲರಿಗೂ ವಿದ್ಯಾರ್ಥಿ ವೇತನ ದೊರೆಯುವಂತೆ ಮಾಡಬೇಕು ಎಂದು ಕೋರಿದರು.
ಮುಖಂಡರಾದ ಸಿ.ಮಹೇಶ್, ಲಿಂಗರಾಜು, ಕುಶಾಲ್, ನಂಜುಂಡಸ್ವಾಮಿ ಇತರರು ಇದ್ದರು.