ಸಮಸ್ಯೆ ವಿರುದ್ಧ ಸಿಡಿದೆದ್ದ ಅನ್ನದಾತರು: ರೈತಧ್ವನಿ ಸಂಘಟನೆಯಿಂದ ಪ್ರತಿಭಟನೆ

protest
ರೈತಧ್ವನಿ ಸಂಘಟನೆ ಪ್ರತಿಭಟನೆ
Published on

ವಿಜಯವಾಣಿ ಸುದ್ದಿಜಾಲ ಕೋಟ

ಸಮಸ್ಯೆಗಳು ಎದುರಾದಾಗ ಸರ್ಕಾರ ರೈತರ ಪರ ನಿಲ್ಲುತ್ತದೆ ಎಂಬ ರೈತರ ನಂಬಿಕೆ ಸುಳ್ಳಾಗಿದೆ. ರೈತನಿಗೆ ನೋವು ಎಂದಿಗೂ ತಪ್ಪಿದ್ದಲ್ಲ. ಇಲ್ಲಿ ಅನ್ನದಾತನ ಕೂಗನ್ನು ಕೇಳುವ ನೈಜ ಜನನಾಯಕ ಯಾರೂ ಇಲ್ಲ. ಇದಕ್ಕೆ ಪ್ರತಿಭಟನೆಯೊಂದೇ ಏಕೈಕ ದಾರಿ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ತೆಕ್ಕಟ್ಟೆಯಿಂದ ಕಾರ್ಕಡ ತನಕದ ಹೊಳೆಯಲ್ಲಿ ಹೂಳು ತುಂಬಿ ಸಮಸ್ಯೆಯಾಗಿದ್ದು, ಶಾಶ್ವತ ಮುಕ್ತಿಗಾಗಿ ಬುಧವಾರ ಕೋಟದ ರೈತಧ್ವನಿ ಸಂಘಟನೆ ನೇತೃತ್ವದಲ್ಲಿ ನಡೆದ ಧರಣಿ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿ, ಕೋಟದ ಗಿಳಿಯಾರು, ಚಿತ್ರಪಾಡಿ ಸಹಿತ ಹಲವೆಡೆ ಹೂಳಿನಿಂದ ಕೃತಕ ನೆರೆ ಸಮಸ್ಯೆಯಾಗಿದ್ದು, ಶೀಘ್ರವೇ ಇದನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.

ಕೃಷಿಕ ಶಾನಾಡಿ ಶ್ರೀನಿವಾಸ ಭಟ್ ಧರಣಿ ಉದ್ಘಾಟಿಸಿದರು. ಇದಕ್ಕೂ ಮೊದಲು ಕೋಟ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ಆನಂದ್ ಸಿ.ಕುಂದರ್, ಜಿ.ತಿಮ್ಮ ಪೂಜಾರಿ, ಸದಾನಂದ ಶೆಟ್ಟಿ, ಗೋಪಾಲ್ ಪೈ, ಡಾ.ಕೃಷ್ಣ ಕಾಂಚನ್, ನಿಲಾವರ ಸುರೇಂದ್ರ ಅಡಿಗ, ರವೀಂದ್ರ ಕಾಮತ್, ರಂಜಿತ್‌ಕುಮಾರ್, ಜ್ಯೋತಿ ಬಿ.ಶೆಟ್ಟಿ, ಎಂ.ಜಯರಾಮ್ ಶೆಟ್ಟಿ, ನಾಗರಾಜ್ ಗಾಣಿಗ, ತಿಮ್ಮ ಕಾಂಚನ್, ಮಹೇಶ್ ಶೆಟ್ಟಿ, ಗಿರೀಶ್ ದೇವಾಡಿಗ, ಭೋಜ ಪೂಜಾರಿ, ಸುಭಾಷ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಕೋ.ಗಿ.ನಾ, ಸಿದ್ಧ ದೇವಾಡಿಗ, ಮಹಾಬಲ ಪೂಜಾರಿ, ಶ್ರೀನಾಥ ಶೆಟ್ಟಿ ತೆಕ್ಕಟ್ಟೆ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಕಿರಣ್ ಕುಂದರ್, ರವೀಂದ್ರ ಶೆಟ್ಟಿ ದ್ಯಾವಸ, ರಮೇಶ್ ಮೆಂಡನ್, ಜಗನಾಥ್ ಪೂಜಾರಿ, ಅಚ್ಯುತ್ ಪೂಜಾರಿ, ಬಾಬು ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಟಿ.ಮಂಜುನಾಥ್ ಗಿಳಿಯಾರು ಪ್ರಸ್ತಾವನೆಗೈದರು. ಕೀರ್ತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿದರು.

ರೈತನಿಗೆ ಪರಿಹಾರಕ್ಕೆ ಆಗ್ರಹ

ಪ್ರತಿಭಟನೆ ವೇಳೆ ಮಲ್ಯಾಡಿಯಿಂದ ಮಡಿವಾಳಸಾಲು ತನಕ ನದಿ ಹೂಳು ತೆಗೆಸುವುದು ಹಾಗೂ ನೆರೆಹಾನಿಯಿಂದ ನಷ್ಟಕ್ಕೊಳಗಾದ ರೈತನಿಗೆ ವಿಶೇಷ ಪರಿಹಾರ ಪ್ಯಾಕೇಜ್ ಸಹಿತ ಹಲವು ಪ್ರಮುಖ ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿರಿಸಿದ್ದಾರೆ.

ಜಿಲ್ಲಾಧಿಕಾರಿಯಿಂದ ಭರವಸೆ

ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಉಪವಾಸ ಕೈಬಿಡುವಂತೆ ಧರಣಿ ನಿರತರಲ್ಲಿ ಮನವಿ ಮಾಡಿ, ಅಹವಾಲುಗಳನ್ನು ಸ್ವೀಕರಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, ರೈತರು ಸಲ್ಲಿಸಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುತ್ತದೆ. ರೈತರಿಗೆ ಪರಿಹಾರ, ಡ್ಯಾಂ ನಿರ್ಮಾಣ, ಹೂಳು ತೆಗೆಯುವಿಕೆ ಸಂಬಂಧಿಸಿ ಪ್ರಸ್ತಾವನೆಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್, ಕಂದಾಯ ಅಧಿಕಾರಿ ಮಂಜು ಬಿಲ್ಲವ, ಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ ಜತೆಗಿದ್ದರು.

ಕಿರು ಸೇತುವೆಗಳನ್ನು ತೆರವುಗೊಳಿಸಿ ಬೃಹತ್ ಸೇತುವೆ ನಿರ್ಮಿಸಬೇಕು. ಕಾಲಕಾಲಕ್ಕೆ ಹೂಳು ತೆಗೆಸಬೇಕು. ಆಗ ಮಾತ್ರ ಕೃತಕ ನೆರೆ ಹಾವಳಿಗೆ ಮುಕ್ತಿ ಸಿಗಲಿದೆ. ಆದರೆ ಸಾಕಷ್ಟು ಬಾರಿ ಮನವಿಗಳನ್ನು ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷೃ ನಮಗೆ ಬೇಸರ ತರಿಸಿದ್ದರಿಂದ ಸತ್ಯಾಗ್ರಹಕ್ಕೆ ಮುಂದಾಗಬೇಕಾಯಿತು. ಇನ್ನಾದರೂ ಬಗೆಹರಿಯದಿದ್ದಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲಿದೆ.-ಟಿ.ಮಂಜುನಾಥ್ ಗಿಳಿಯಾರು, ಹೋರಾಟ ಸಮಿತಿಯ ಪ್ರಮುಖ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net