ಸಹಕಾರಿ ಸಂಘಕ್ಕೆ ಅಕ್ರಮ ನೇಮಕಕ್ಕೆ ಖಂಡನೆ

mkg1
Published on

ಜಗಳೂರು: ತಾಲೂಕಿನ ದೊಣೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಖ್ಯಕಾರ್ಯನಿರ್ವಕಾಧಿಕಾರಿ ಹುದ್ದೆಯನ್ನು ಅಕ್ರಮವಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಬುಧವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ತಾಲೂಕು ಕಚೇರಿ ಮುಂಭಾಗ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಪ್ರಕರಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೊಣೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯಕಾರ್ಯನಿರ್ವಹಕಾಧಿಕಾರಿ ಹುದ್ದೆ ಖಾಲಿಯಾಗಿದ್ದು, ಹುದ್ದೆಗೆ ಅರ್ಹರನ್ನು ಪರಿಗಣಿಸದೇ ಕಾನೂನು ಬಾಹಿರವಾಗಿ ಹೊರಗಿನವರನ್ನು ನೇಮಕ ಮಾಡಲಾಗಿದೆ. ಇದೇ ಸಂಘದಲ್ಲಿ ಸೇವೆ ಸಲ್ಲಿಸುತ್ತಿರುವ ಎ.ಟಿ. ತಿಪ್ಪೇಸ್ವಾಮಿ ಅವರ ಸೇವಾವಧಿ ಪರಿಗಣಿಸಿ ಹುದ್ದೆ ನೀಡದೇ ಜಾತಿ ಕಾರಣಕ್ಕೆ ಹುದ್ದೆ ತಪ್ಪಿಸಿ ಹಣವಂತರನ್ನು ನೇಮಕ ಮಾಡಿರುವುದು ಖಂಡನಿಯ ಎಂದರು.

ನಾಲ್ಕು ವರ್ಷ ಸೇವಾ ಅನುಭವಿದೆ. ಯಾವುದೇ ಒಂದು ಸಭೆ ಮಾಡದೇ ಸದಸ್ಯರ ಅಭಿಪ್ರಾಯ ತಿಳಿಯದೇ ಕೆಲವೇ ವ್ಯಕ್ತಿಗಳು ಸುಳ್ಳು ದಾಖಲೆ ಸೃಷ್ಟಿಸಿ ನೇಮಕ ಮಾಡಿರುವುದು ಸರಿಯಲ್ಲ. ಈಗಾಗಲೇ ನೇಮಕಗೊಂಡಿರುವ ವ್ಯಕ್ತಿಯನ್ನು ವಜಾಗೊಳಿಸಿ ತಿಪ್ಪೇಸ್ವಾಮಿಗೆ ಹುದ್ದೆ ನೀಡಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ದಸಂಸ ಸಂಚಾಲಕ ಮಾಚಿಕೆರೆ ಸತೀಶ್ ಎಚ್ಚರಿಕೆ ನೀಡಿದರು.

ತಾಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ಹರೀಶ್‌ಕುಮಾರ್ ಮಾತನಾಡಿ, ನೇಮಕಾತಿಯಲ್ಲಿ ಯಾವುದೇ ತಪ್ಪು ನಡೆದಿಲ್ಲ. ಈಗಾಗಲೇ ಸಮಿತಿ ಮತ್ತು ಮೇಲಧಿಕಾರಿಗಳ ಆದೇಶ ಪಾಲನೆ ಮಾಡಿದ್ದೇವೆ. ಈ ಬಗ್ಗೆ ಇನ್ನೊಮ್ಮೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಪ್ರಗತಿಪರ ಹೋರಾಟಗಾರ ಆರ್. ಓಬಳೇಶ್, ಮುಖಂಡರಾದ ಕುಬೇಂದ್ರಪ್ಪ, ಗೌರಿಪುರ ಕುಬೇರಪ್ಪ, ಪೂಜಾರಿ ಸಿದ್ದಪ್ಪ, ಕರಿಸಬಸಪ್ಪ, ನಿಂಗಪ್ಪ, ಹನುಮಂತಪ್ಪ, ರೈತ ಸಂಘದ ಮುಖಂಡ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net