ರೈತಪರ ಸಂಘಟನೆಗಳಿಂದ ಪ್ರತಿಭಟನೆ

4Manjari3
ಬೆಳಗಾವಿ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿ ಅಡುಗೆ ಮಾಡುವ ಮೂಲಕ ರೈತರು ಪ್ರತಿಭಟಿಸಿದರು. ರಾಜು ಮೊರವೆ, ಭೀಮಶಿ ಗದಾಡಿ, ರಮೇಶ ಮಡಿವಾಳರ, ಶಂಕರ ಬೇವಿನಕಟ್ಟಿ ಇತರರಿದ್ದರು.
Published on

ಬೆಳಗಾವಿ: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಆರ್‌ಆರ್ ನಂಬರಗಳಿಗೆ ಆಧಾರ್ ಜೋಡಣೆ ಕೈಬಿಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ನಗರದ ಹೆಸ್ಕಾಂ ಕಚೇರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿ ಹೆಸ್ಕಾಂ ಕಚೇರಿ ಆವರಣದಲ್ಲಿಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನಿಗದಿಪಡಿಸಿ ಕಾನೂನು ಬದ್ಧಗೊಳಿಸುವವರೆಗೆ ಮತ್ತು ಡಾ. ಸ್ವಾಮಿನಾಥ್ ವರದಿ ಜಾರಿ ಮಾಡುವವರೆಗೆ ಕೃಷಿ ಕ್ಷೇತ್ರಕ್ಕೆ, ಕೃಷಿ ಯಂತ್ರೋಪಕರಣಗಳಿಗೆ, ವಿದ್ಯುತ್ ಸಂಪರ್ಕಗಳಿಗೆ ಸಹಾಯಧನ ನೀಡುವುದು ಸರ್ಕಾರದ ಜವಾಬ್ದಾರಿ. ಕೂಡಲೇ ರೈತ ವಿರೋಧಿ ವಿದ್ಯುತ್ ನೀತಿ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು. ನಾಲ್ಕೈದು ವರ್ಷದ ಅವಧಿಯಲ್ಲಿ ಹೆಸ್ಕಾಂ ಇಂಜಿನಿಯರ್‌ಗಳು ರೈತರಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಹೊಸದಾಗಿ ಸಂಪರ್ಕ ಪಡೆದುಕೊಳ್ಳಲು ಲಕ್ಷಾಂತರ ರೂ. ವೆಚ್ಚ ಮಾಡಬೇಕಾಗಿದೆ. ಹೆಸ್ಕಾಂ ಅಧಿಕಾರಿಗಳು ಹಣ ವಸೂಲಿ ಮಾಡುವುದನ್ನು ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ಮೂಲಕ ಕಚೇರಿಗಳಿಗೆ ಶಾಶ್ವತ ಬೀಗ ಹಾಕಲಾಗುವುದು. ಸಚಿವರು, ಶಾಸಕರು ರೈತರು ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬಿಸಿ ಮುಟ್ಟಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜು ಮೊರವೆ, ಭೀಮಶಿ ಗದಾಡಿ, ರಮೇಶ ಮಡಿವಾಳರ, ಶಂಕರ ಬೇವಿನಕಟ್ಟಿ , ಭೀಮಶಿ ಹುಲಕುಂದ, ಪ್ರಕಾಶ ಪಾಟೀಲ, ಶೋಭಾ ಕೂಗಿ, ಸುಮಿತ್ರಾ ದೇವರಡ್ಡಿ ಇತರರಿದ್ದರು.

ರೈತರ ಪ್ರಮುಖ ಬೇಡಿಕೆಗಳು: *ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಕೈಬಿಡಬೇಕು. * ವಿದ್ಯುತ್ ಪರಿವರ್ತಕ, ಸಲಕರಣೆಗಳನ್ನು ಉಚಿತವಾಗಿ ನೀಡಬೇಕು. * ವಿದ್ಯುತ್ ಯೂನಿಟ್ ದರವನ್ನು ಕಡಿಮೆ ಮಾಡಬೇಕು. *ವಿದ್ಯುತ್ ಅಪಘಾತಗಳಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. *ಸೋಲಾರ್ ಸಂಪರ್ಕ ಹೊಂದಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಆದೇಶ ಕೈಬಿಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net