ರೈತಪರ ಸಂಘಟನೆಗಳಿಂದ ಪ್ರತಿಭಟನೆ

17 KRN-2
ಕೆ.ಆರ್.ನಗರದ ತಾಲೂಕು ಕಚೇರಿ ಮುಂಭಾಗ ರೈತ ಸಂಘಟನೆಗಳು ಮತ್ತು ಪ್ರಗತಿ ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪ್ರತಭಟನೆ ನಡೆಸಿದರು. ಸ್ಥಳಕ್ಕೆ ಕೆ.ಆರ್.ನಗರ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಸಾಲಿಗ್ರಾಮ ತಾಲೂಕು ತಹಸೀಲ್ದಾರ್ ನರಗುಂದ ಭೇಟಿ ನೀಡಿ ಆಹವಾಲು ಸ್ವೀಕರಿಸಿದರು. ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಹಾಡ್ಯರವಿ, ತಿಮ್ಮಪ್ಪ ಹರ್ಷಕುಮಾರ್, ನಾಗರಾಜು, ಗೌರವಧ್ಯಕ್ಷ ಮಾಯಿಗೌಡ್ರು ಇದ್ದರು.
Published on

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದ್ದು, ತಾಲೂಕು ಆಡಳಿತ ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯದೆ, ಸಮರ್ಪಕ ಕುಡಿಯುವ ನೀರು ಒದಗಿಸದೆ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿ ರೈತಪರ ಸಂಘಟನೆಗಳು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದವು.


ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರು, ಪ್ರಗತಿಪರ ಸಂಘಟನೆಗಳ ಸದಸ್ಯರು, ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡು ಮಹಾತ್ಮಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ತಾಲೂಕು ಕಚೇರಿ ಒಳಗೆ ಮುತ್ತಿಗೆ ಹಾಕಲು ನುಗ್ಗುವ ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ರೈತ ಸಂಘಟನೆ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಬಳಿಕ ಕಚೇರಿ ಬಾಗಿಲಲ್ಲೇ ಧರಣಿ ಕುಳಿತ ಪ್ರತಿಭಟನಾಕಾರರು, ತಾಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೊಷಣೆ ಮೊಳಗಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಆಡಳಿತ ಭ್ರಷ್ಟಾಚಾರದ ಕೇಂದ್ರವಾಗಿದೆ. ಬರ ನಿರ್ವಹಣೆ ಮಾಡದೆ ಜಾನುವಾರುಗಳಿಗೆ ಮೇವು ಬ್ಯಾಂಕ್, ಗೋಶಾಲೆ ತೆರೆಯದೆ, ಸಮರ್ಪಕವಾಗಿ ಕುಡಿಯುವ ನೀರನ್ನೂ ಒದಗಿಸದೆ ತಾಲೂಕು ಆಡಳಿತ ಕೈಚೆಲ್ಲಿದೆ ಆಕ್ರೋಶ ವ್ಯಕ್ತಪಡಿಸಿದರು.


ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ 10 ಸಾವಿರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡದೆ ರೈತರು ಸಂಕಷ್ಟದಲ್ಲಿದ್ದಾರೆ. ಅಕ್ರಮ-ಸಕ್ರಮ ಮತ್ತೆ ಮರು ಜಾರಿ ಮಾಡಬೇಕು. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ರೈತರ ಮನೆ ಬಾಗಿಲಿಗೆ ನಮ್ಮ ಸರ್ಕಾರದ ಆಡಳಿತ ಎನ್ನುತ್ತಾರೆ. ಎಲ್ಲಿದೆ ನಿಮ್ಮ ಆಡಳಿತ? ರೈತರ ಜಾನುವಾರುಗಳಿಗೆ ಮೇವು ಬ್ಯಾಂಕ್, ಕುಡಿಯುವ ನೀರು ಒದಗಿಸದೇ ಇರುವುದೇ ನಿಮ್ಮ ಆಡಳಿತನಾ? ಎಂದು ವಾಗ್ದಾಳಿ ನಡೆಸಿದರು.


ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಮಾತನಾಡಿ, ತಾಲೂಕು ಆಡಳಿತದ ವೈಫಲ್ಯ ಹಾಗೂ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರು ರೈತರೊಂದಿಗೆ ನಡೆದುಕೊಳ್ಳುವ ವರ್ತನೆ ಖಂಡಿಸಿದರು.


ತಾಲೂಕು ಕಚೇರಿಯಲ್ಲಿ ಲಂಚ ಕೊಡದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಜನನ-ಮರಣ ಪತ್ರ ಪಡೆಯಲು ನಾಲ್ಕೈದು ತಿಂಗಳು ಸತಾಯಿಸುತ್ತಾರೆ. ಲಂಚ ಕೊಟ್ಟರೆ ವಾರದಲ್ಲಿ ಸಿಗುತ್ತದೆ. ರೈತರ ಪರವಾಗಿ ತಾಲೂಕಿನ ಅಧಿಕಾರಿಗಳು ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೆ.ಆರ್.ನಗರ ತಾಲೂಕು ಕಚೇರಿಯಿಂದ ಡಿಸಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.


ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಪೂರ್ಣಿಮಾ, ರೈತ ಸಂಘಟನೆಗಳ ಮುಖಂಡರ ಜತೆ ಚರ್ಚಿಸಿದರು. ಪಶುವೈದ್ಯ ಇಲಾಖೆಯ ಅಧಿಕಾರಿಗಳು 36 ವಾರಗಳವರೆವಿಗೂ ಮೇವು ಕೊರತೆ ಇಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಮೇವು ಬ್ಯಾಂಕ್ ತೆರೆದಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕಿ ಕುಪಿತರಾದ ರೈತ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ತಾಲೂಕಿನಲ್ಲಿ ಮಳೆಯಾಗದೆ ಎಲ್ಲಿಂದ ಮೇವು ಬೆಳೆಯಲು ಸಾಧ್ಯ. ಯಾರೊ ಒಂದಿಬ್ಬರು ಪಂಪ್‌ಸೆಟ್‌ನಲ್ಲಿ ಜೋಳ ಬೆಳೆದರೆ ಅದು ಎಲ್ಲರೂ ಬೆಳೆದ ಹಾಗೇಯೇ ?ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ, ಪರಿಶೀಲಿಸದೆ ಉತ್ತರ ಕೊಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಬಳಿಕ ಪ್ರತಿಭಟನಾಕಾರರು 11 ಅಂಶಗಳ ಬೇಡಿಕೆ, ಹಕ್ಕೊತ್ತಾಯದ ಮನವಿ ಪತ್ರವನು ತಹಸೀಲ್ದಾರ್ ಪೂರ್ಣಿಮಾ ಮತ್ತು ಸಾಲಿಗ್ರಾಮ ತಹಸೀಲ್ದಾರ್ ನರಗುಂದ ಮೂಲಕ ರಾಜ್ಯದ ಸರ್ಕಾರಕ್ಕೆ ಸಲ್ಲಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಡ್ಯರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹರ್ಷಕುಮಾರ್, ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗರಾಜು, ಗೌರವಾಧ್ಯಕ್ಷ ಮಾಯಿಗೌಡ್ರು, ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಬಾಲು, ಶಿವಣ್ಣೇಗೌಡ, ನಾಗರಾಜು, ಕಾಳೇಗೌಡ, ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಎಂ.ಜೆ.ನಾಗರಾಜೇಗೌಡ, ಅಖಂಡ ಕರ್ನಾಟಕ ಸೇವಾದಳದ ಅಧ್ಯಕ್ಷ ಶಿವುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net