ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

IMG-20241225-WA0235
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ ಷಾ ಹೇಳಿಕೆ ಖಂಡಿಸಿ ಬುಧವಾರ ಪಟ್ಟಣದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
Published on

ಆಲೂರು: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆ ಖಂಡಿಸಿ ಬುಧುವಾರ ತಾಲೂಕು ಆಡಳಿತ ಸೌಧ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ದಲಿತಪರ ಸಂಘಟನೆಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.

ತಾಲೂಕು ಛಲವಾದಿ ಮಹಾಸಭಾ ಗೌರವಾಧ್ಯಕ್ಷ ಎ.ಟಿ ಮಲ್ಲೇಶ್ ಮಾತನಾಡಿ, ಭಾರತದ ಚರಿತ್ರೆಯಲ್ಲಿ ಡಿ.25 ಬಹು ಮುಖ್ಯವಾದ ದಿನ. ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೇ ಮೌಲ್ಯಗಳನ್ನಾಗಿಸಿ ಭಾರತೀಯ ಸುಪ್ತ ಮನಸ್ಸನ್ನು ಆಳುತ್ತಿರುವ ಮನುಸ್ಮೃತಿ ಎಂಬ ಭೂತಕಾಲದ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ ಈ ದಿನ. ಇದನ್ನು ನಾವು ಅರಿಯಬೇಕು. ಇಂತಹ ಕಾಲಘಟ್ಟದಲ್ಲೂ ಅಮಿತ್ ಷಾ ಅವರು ಸಂಸತ್‌ನಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ ಅಪಮಾನ ಮಾಡಿರುವುದು ದೇಶದ್ರೋಹದ ಕೃತ್ಯ. ಇಂತಹ ಕೀಳುಮಟ್ಟದ ಅಭಿರುಚಿವುಳ್ಳ ವ್ಯಕ್ತಿ ದೇಶದ ಗೃಹ ಸಚಿವ ಆಗಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಬಸವರಾಜು ಗೇಕರವಳ್ಳಿ ಮಾತನಾಡಿ, ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಪ್ರತಿನಿತ್ಯ ಸ್ಮರಿಸುತ್ತದೆ. ಅವರು ನೀಡಿರುವ ಸಂವಿಧಾನವನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿಗಳು ಅವರನ್ನೇ ಅಪಮಾನ ಮಾಡಿ ಮಾತನಾಡಿರುವುದು ಖಂಡನೀಯ ಎಂದರು.

ಕಾಂಗ್ರೆಸ್ ತಾಲೂಕು ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಲೋಕೇಶ್ ಅಜ್ಜೆನಹಳ್ಳಿ ಮಾತನಾಡಿದರು. ಛಲವಾದಿ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ಹುಣಸುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್, ತಾಲೂಕು ನಿರ್ದೇಶಕರಾದ ನಂದೀಶ್, ರವಿ ಬೇಡುಚವಳ್ಳಿ, ದಲಿತ ಮುಖಂಡರಾದ ಮಂಜಣ್ಣ ಸುಗೋಡು, ರಘು ಮರಸು, ಚಿಕ್ಕಣ್ಣ, ಹನುಮಯ್ಯ, ಜುಂಜಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net