

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಲಾವಿದರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜ್ಯ ನೊಂದ ಬಡಕಲಾವಿದರ ಒಕ್ಕೂಟದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಕೋಟೆ ಆಂಜನೇಯ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದ ಕಲಾವಿದರು, ದಸರಾ ಮಹೋತ್ಸವದಲ್ಲಿ ಒಂದೇ ವ್ಯಕ್ತಿಗೆ ಐದಾರು ಕಾರ್ಯಕ್ರಮಗಳನ್ನು ನೀಡಿ ಸಾಂಸ್ಕೃತಿಕ ಉಪಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಮನೆ ಆಡಳಿತ ಮಂಡಳಿಯ ಅಧಿಕಾರಿ ವರ್ಗ ಬಡ ಕಲಾವಿದರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
2012ರಿಂದ ಒಂದೇ ವ್ಯಕ್ತಿಗೆ ಕಾರ್ಯಕ್ರಮ ನೀಡುತ್ತಿದ್ದು, ಅವರು ಅಧಿಕಾರಿಗಳಿಗೆ ಅಮೀಷ ನೀಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಸಿಬ್ಬಂದಿಯೊಬ್ಬರು ಯಾವುದೇ ಕಲೆಯ ಹಿನ್ನೆಲೆ ಇಲ್ಲದ ತಮ್ಮ ಕುಟುಂಬದವರ ಹೆಸರಿನಲ್ಲಿ ಕಾರ್ಯಕ್ರಮ ನೀಡಿದ್ದಾರೆ ಎಂದು ಆರೋಪಿಸಿದರು.
ಇಲಾಖೆಯಲ್ಲಿ ನಮ್ಮ ಅರ್ಜಿ ಸ್ವೀಕರಿಸಲು ಹಿಂಜರಿಯುವ ಅಧಿಕಾರಿಗಳು ಈ ಬಗ್ಗೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಎಚ್ಚೆತ್ತು ಈ ಅನ್ಯಾಯದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಗೀತ ನಾದಸ್ವರ, ಡೋಲು, ಜನಪದ ತಂಡದವರು ಎಲ್ಲ ಸರ್ಕಾರಿ ಹಾಗೂ ರಾಜಕಾರಣಿಗಳ ಕಾರ್ಯಕ್ರಮಕ್ಕೆ ತೆರಳಿ ಸಹಕರಿಸುತ್ತೇವೆ. ಅವರೂ ನಮ್ಮ ಸಮಸ್ಯೆಯ ಬಗ್ಗೆ ಗಮನ ನೀಡಬೇಕು. ಇಲಾಖೆಯೊಳಗೆ ಕಲಾವಿದರನ್ನು ಕಡೆಗಣಿಸುತ್ತಿರುವ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಕಲಾವಿದ ಪಿ.ಶ್ರೀನಿವಾಸ, ರಾಜೇಶ್ ಆದ್ಯಾಪುರ, ಮಂಜುನಾಥ್, ಧನರಾಹ್, ಅಶೋಕ್ ಕುಮಾರ್, ಮಧುಕುಮಾರ್, ಮೋಹನ, ರಾಮಚಂದ್ರ, ಪ್ರದೀಪ್ ಇತರರು ಇದ್ದರು.