

ವಿಜಯಪುರ;ರಸ್ತೆ ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ನಗರದ ಅಥಣಿ ರಸ್ತೆ ತಡೆ ಮಾಡುವ ಜತೆಗೆ ರಸ್ತೆ ಗುಂಡಿಗಳಲ್ಲಿ ಸಸಿಗಳನ್ನು ನೆಟ್ಟು ಬಿಜೆಪಿ ಕಾರ್ಯಕರ್ತರು ಬುಧವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಇಲ್ಲಿನ ನೂತನ ಪ್ರವಾಸಿ ಮಂದಿರದ ಬಳಿ ಅಥಣಿ ರಸ್ತೆಯಲ್ಲಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ&ಜೀವಕ್ಕೆ ಸಂಚಕಾರ, ಗುಂಡಿ ಮುಚ್ಚದೇ ರಾಜ್ಯದ ಜನತೆ ಹಾಳು ಮಾಡಿದ ಸರ್ಕಾರಕ್ಕೆ ಧಿಕ್ಕಾರ, ಗುಂಡಿಗಳ ಜನಕ ಡಿ.ಕೆ. ಶಿವಕುಮಾರ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.ವಿ.ಪ. ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ರಾಜ್ಯ ಸರ್ಕಾರ ಒಂದೇ ಒಂದು ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ. ರಸ್ತೆಗಳ ಅವ್ಯವಸ್ಥೆ ಖಂಡಿಸಿ ಹಲವು ಉದ್ಯಮಗಳು ರಾಜ್ಯ ತೊರೆಯುತ್ತೇವೆ ಎಂದು ಹೇಳಿದರೆ ನಮ್ಮ ಡಿಸಿಎಂ ಅದನ್ನು ಬ್ಲಾಕ್ ಮೇಲ್ ಎಂದು ಕರೆದರು. ರಸ್ತೆ ನಿರ್ಮಿಸಿಕೊಡಿ ಎಂದು ಹೇಳುವುದು ಬ್ಲಾಕ್ ಮೇಲ್ ಎಂದಾದರೇ ಹೇಗೆ ಎಂದು ಪ್ರಶ್ನಿಸಿದರು.
ಸರ್ಕಾರದ ಇಂತಹ ನೀತಿಯಿಂದಾಗಿ ಹಲವು ಕಂಪನಿಗಳು ರಾಜ್ಯ ಬಿಡುತ್ತಿವೆ. ಅದರಿಂದ ಉದ್ಯೋಗಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ಮಾಡಬೇಕಾದ ಸರ್ಕಾರ ಆ ವಿಷಯದಲ್ಲಿಯೂ ಕೂಡ ದರ್ಪ ತೋರಿ ಹೋಗುವುದಾದರೆ ಬಿಟ್ಟು ಹೋಗಿ ಎಂದು ಉದ್ಯಮ ಸಂಸ್ಥೆಗಳಿಗೆ ಹೇಳುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸಿದೆ ಎಂದ ಅವರು, ಇದೊಂದು ರ್ನಿಲಜ್ಜ ಸರ್ಕಾರ, ರಸ್ತೆ ಕೇಳಿದರೆ ಬ್ಲಾಕ್ ಮೇಲ್ ಎಂದು ಹೇಳುವ ಕೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಕೇವಲ ಗ್ಯಾರಂಟಿ ಎಂದು ಹೇಳಿ ಅಭಿವೃದ್ಧಿಗೆ ಒಂದೇ ಒಂದು ರೂ. ಅನುದಾನ ರಾಜ್ಯ ಸರ್ಕಾರ ನೀಡಿಲ್ಲ. ರಾಜ್ಯದ ರಸ್ತೆಗಳು ಸರ್ಕಾರದ ರ್ನಿಲಕ್ಷದಿಂದಾಗಿ ಸರ್ವನಾಶವಾಗಿವೆ. ರಾಜ್ಯದ ನತೆಗೆ ಕಾಂಗ್ರೆಸ್ ಸರ್ಕಾರ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.
ಪಾಲಿಕೆ ಸದಸ್ಯ ರಾಹುಲ್ ಜಾಧವ ಮಾತನಾಡಿದರು. ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಗೋಪಾಲ ಟಕಾಂಬಳೆ, ಚಿದಾನಂದ ಛಲವಾದಿ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗುರ, ಎಸ್.ಎ. ಪಾಟೀಲ, ಸುರೇಶ ಬಿರಾದಾರ, ಉಮೇಶ ಕೊಳಕುರ, ಬಸವರಾಜ್ ಬೈಚಬಾಳ, ರಾಜೇಶ ತಾವಸೆ, ಭೀಮಾಶಂಕರ ಹದನೂರ, ಭೀಮಸಿಂಗ್ ರಾಠೋಡ, ಬಾಲರಾಜ್ ರೆಡ್ಡಿ, ರಾವೇಂದ್ರ ಕಾಪಸೆ, ಸಚಿನ ಬೊಂಬ್ಳೆ, ಶ್ರೀಕಾಂತ್ ಶಿಂಧೆ, ರವಿಕಾಂತ ಬಗಲಿ, ರಾಜು ಬಿರಾದಾರ, ಸಂದೀಪ ಪಾಟೀಲ, ವಿಜಯ ಜೋಶಿ ಮತ್ತಿತರರಿದ್ದರು.
ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ಗುಂಡಿಗಳಲ್ಲಿ ಸಸಿಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು. ರಮೇಶ ಜಿಗಜಿಣಗಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಹುಲ್ ಜಾಧವ ಮತ್ತಿತರರಿದ್ದಾರೆ.