ಭತ್ತದ ನಾಟಿ ಮಾಡಿ ಪ್ರತಿಭಟನೆ

Protest by planting Paddy
Published on

ಹಾನಗಲ್ಲ: ಮಳೆ ಬಂದರೆ ರಾಡಿ ಗುಂಡಿಯಲ್ಲಿ ಸರ್ಕಸ್ ನಡಿಗೆ, ಬೇಸಿಗೆ ಬಂದರೆ ಧೂಳುಮಯ, ಬಸ್ ನಿಲ್ದಾಣ ತಿಪ್ಪೆಯಾಗಿದೆ. ಹತ್ತಾರು ವರ್ಷಗಳಿಂದ ರಸ್ತೆ ದುರಸ್ತಿ ನಡೆದಿಲ್ಲ, ಅಧಿಕಾರಿಗಳಿಗೆ ಕೊಟ್ಟ ಮನವಿಗಳು ಫಲ ನೀಡಿಲ್ಲ ಎಂದು ಆರೋಪಿಸಿದ ತಾಲೂಕಿನ ಹೊಸೂರು ಗ್ರಾಮಸ್ಥರು ರಸ್ತೆಯಲ್ಲಿ ಗುರುವಾರ ಭತ್ತದ ನಾಟಿ ಮಾಡಿ ಪ್ರತಿಭಟನೆ ನಡೆಸಿದರು.

ಶಾಲೆ-ಕಾಲೇಜುಗಳು, ಬಸ್ ನಿಲ್ದಾಣ, ಗ್ರಾಮ ಪಂಚಾಯಿತಿ, ನಾಡಕಚೇರಿ, ಪಶು ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯ ಎಲ್ಲವೂ ಬಸ್ ನಿಲ್ದಾಣದ ಸಮೀಪದಲ್ಲಿವೆ. ಇಲ್ಲಿಯೇ ಸಂತೆ ನಡೆಯುತ್ತದೆ. ಮಳೆಗಾಲದಲ್ಲಂತೂ ಓಡಾಟಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ರಸ್ತೆ ಹಾಳಾಗಿದೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಕಸ ತೆಗೆಯುವುದಿಲ್ಲ. ಸಾರಿಗೆ ಸಂಸ್ಥೆ ಅಧಿಕಾರಿಗಳು ಮಳಿಗೆಗಳ ಬಾಡಿಗೆ ವಸೂಲಿಗೆ ಬಿಟ್ಟರೆ ಇತ್ತ ಹಾಯುವುದೇ ಇಲ್ಲ ಎಂದು ಕರವೇ ಕಾರ್ಯಕರ್ತರು ಆರೋಪಿಸಿದರು.

ನಿವೃತ್ತ ಪಿಎಸ್‌ಐ ನಿಂಗಪ್ಪ ಹೊಸೂರ, ಬಸವರಾಜ ಗುರಣ್ಣನವರ, ಈರಪ್ಪ ಪುರಾಣಿ, ರವಿ ಮಡಿವಾಳರ, ಪ್ರಶಾಂತ ಸಿಗ್ಗಾಂವಕರ, ಮಂಜು ಹುಲ್ಲಾಳದ, ಸೋಮು ಹರವಿ, ವಸಂತ ಸುಣಗಾರ, ಹರೀಶ ಬಡಿಗೇರ, ಮುತ್ತು ಹಿರೇಬಾಸೂರ, ಪ್ರಭು ಪಾಟೀಲ, ವಿನಾಯಕ ಗುರಣ್ಣನವರ, ಮಾಲಿಂಗಗೌಡ ತಾವರಗೊಪ್ಪ ಹಾಗೂ ಸಾರ್ವಜನಿಕರು, ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಹಸೀಲ್ದಾರ್ ಭೇಟಿ: ಪ್ರತಿಭಟನೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಸ್. ರೇಣುಕಾ ಅವರು ಹೊಸೂರ ಗ್ರಾಮಕ್ಕೆ ಭೇಟಿ ನೀಡಿ, ಬಸ್ ನಿಲ್ದಾಣದ ಸುತ್ತಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ಲೋಕೋಪಯೋಗಿ, ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net