ರಸ್ತೆ ದುರಸ್ತಿಗೆ ಒತ್ತಾಯಿಸಿ ಬಾಳೆಗಿಡನೆಟ್ಟು ಪ್ರತಿಭಟನೆ

nrp 9
Published on

ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದ ಎಲ್ಲ ರಸ್ತೆಗಳಲ್ಲೂ ಹೊಂಡ, ಗುಂಡಿಗಳಿಂದ ಕೂಡಿದ್ದು, ಶಾಸಕರು ಹೊಂಡ ಮುಚ್ಚದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಎಚ್ಚರಿಕೆ ನೀಡಿದರು.

ರಸ್ತೆಯ ಹೊಂಡ ಮುಚ್ಚುವಂತೆ ಬಿ.ಎಚ್.ಕೈಮರ ಸಮೀಪದ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ಹಾಗೂ ಹೊಂಡಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಶಾಸಕರು ಗುಣಮಟ್ಟದ ರಸ್ತೆ ಮಾಡುವುದಾಗಿ ಭರವಸೆ ನೀಡಿದ್ದರು. ಗುಣಮಟ್ಟದ ರಸ್ತೆ ಮಾಡಿದ್ದರೆ ಇಷ್ಟು ಬೇಗ ಹೊಂಡಗಳು ಬೀಳುತ್ತಿರಲಿಲ್ಲ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ತೆರಿಗೆ ಜಾಸ್ತಿ ಮಾಡಿ ಹಣ ಹೊಂದಾಣಿಕೆ ಮಾಡಲಾಗಿದೆ. ಅಭಿವೃದ್ಧಿ ಇಟ್ಟ ಹಣದಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕಾಗಿತ್ತು. ಹೊಂಡ, ಗುಂಡಿಗಳನ್ನು ಮುಚ್ಚದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಂಗಾಪುರದಂತೆ ರಸ್ತೆ ಮಾಡುತ್ತೇವೆ ಎಂದಿದ್ದರು. ಈಗ ರಸ್ತೆ ಗುಂಡಿಯೇ ಮುಚ್ಚುತ್ತಿಲ್ಲ. ಆದಷ್ಟು ಬೇಗ ರಸ್ತೆಯ ಗುಂಡಿ ಮುಚ್ಚಿ ಅಪಘಾತ ತಪ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಬಿಜೆಪಿ ಮುಖಂಡ ಎಂ.ಎನ್.ನಾಗೇಶ್, ಪ್ರೀತಂ, ಬಿಜೆಪಿ ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್, ಮುಖಂಡರಾದ ಪಿ.ಜೆ.ಆಂಟೋನಿ, ಎ.ಬಿ.ಮಂಜುನಾಥ್, ಎಚ್.ಡಿ.ಲೋಕೇಶ್, ಶ್ರೀನಾಥ್, ನಗರ ಘಟಕದ ಅಧ್ಯಕ್ಷ ಸುರಭಿ ರಾಜೇಂದ್ರ, ಸೈಯದ್ ಪರ್ವೀಜ್, ಬಿ.ಎಸ್.ಆಶೀಶ್ ಕುಮಾರ್, ರೀನಾ ಬೆನ್ನಿ, ಪ್ರಸನ್ನ, ಜಗದೀಶ್, ಸಂದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net