ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆ

ald protest
ಬಿಜೆಪಿ ಕಾರ್ಯಕರ್ತರು ಆಲ್ದೂರು ಮುಖ್ಯ ರಸ್ತೆಯ ಬೀರಂಜಿ ಹಳ್ಳದ ಬಳಿ ರಸ್ತೆಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ದೀಪಕ್ ದೊಡ್ಡಯ್ಯ, ಅರವಿಂದ್, ರವಿ ಬಸರವಳ್ಳಿ, ಮನು, ವೀಣಾ ಶೆಟ್ಟಿ, ಪ್ರತಿಭಾ ಇತರರಿದ್ದರು.
Published on

ಆಲ್ದೂರು: ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳೂ ಗುಂಡಿಬಿದ್ದು ವಾಹನ ಓಡಾಟಕ್ಕೆ ತೊಂದರೆಯಾಗಿದೆ. ರಸ್ತೆ ದುರಸ್ತಿಪಡಿಸಿ ಎಂದು ಆಗ್ರಹಿಸಿ ಭಾನುವಾರ ಸಂಜೆ ಬಿಜೆಪಿ ಕಾರ್ಯಕರ್ತರು ಬೀರಂಜಿ ಹಳ್ಳದ ರಸ್ತೆಯ ಬಳಿ ಬಾಳೆಗಿಡ ನೆಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯನ್ನು ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಶಾಸಕರು ರಸ್ತೆ ದುರಸ್ತಿ ಮಾಡುವಲ್ಲಿ ವಿಫಲವಾಗಿದ್ದಾರೆ. ಗ್ರಾಮೀಣ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಗುಂಡಿಬಿದ್ದಿವೆ. ರಸ್ತೆಯ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ. ಮುಖ್ಯಮಂತ್ರಿ ಅವರೇ ಹಗರಣದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಒಂದು ವಾರದೊಳಗೆ ರಸ್ತೆ ದುರಸ್ತಿಪಡಿಸದಿದ್ದರೆ ರಸ್ತೆಯನ್ನು ಒಂದು ದಿನ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಮಂಡಲದ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ, ಶಾಸಕರು ಜನರಿಗೆ ಸಿಗುತ್ತಿಲ್ಲ. ಅವರನ್ನು ಹುಡುಕುವುದು ಕಷ್ಟವಾಗಿದೆ. ಇಂಥ ಜನ ಪ್ರತಿನಿಧಿಗಳಿಂದ ಅಭಿವೃದ್ಧಿ ನಿರೀಕ್ಷೆ ಅಸಾಧ್ಯ ಎಂದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾತನಾಡಿ, ಶಾಸಕರು ವಿದೇಶ ಪ್ರವಾಸದಲ್ಲೇ ಇರುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಚಿಕ್ಕಮಗಳೂರಿನಿಂದ ಆಲ್ದೂರು ಪಟ್ಟಣದವರೆಗೆ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಹೊಂಡಗಳಾಗಿ ಪ್ರಯಾಣ ಪ್ರಯಾಸವಾಗಿದೆ ಎಂದು ದೂರಿದರು.
ಮಂಡಲದ ಅಧ್ಯಕ್ಷ ರವಿ ಬಸರವಳ್ಳಿ, ಯುವ ಮೋರ್ಚಾ ಅಧ್ಯಕ್ಷ ಮನು, ಮಹಿಳಾ ಮೋರ್ಚಾದ ವೀಣಾ ಶೆಟ್ಟಿ, ಪ್ರತಿಭಾ ನವೀನ್, ಚಂಪಾ ಜಗದೀಶ್, ಹೋಬಳಿ ಅಧ್ಯಕ್ಷ ನಾಗೇಶ್, ದಿನೇಶ್ ಮುಗಳವಳ್ಳಿ, ಯುವ ಮೋರ್ಚಾ ಅಧ್ಯಕ್ಷ ಸಿಂಧುಕುಮಾರ್, ರವೀಂದ್ರ, ಭವ್ಯಾ ನಟೇಶ್, ಮಂಜುಳಾ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net