ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

Protest by placing dead bodies in front of the hospital
ಬಾಗಲಕೋಟೆಯ ಎಪಿಎಂಸಿ ಬಳಿ ಇರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಎದುರು ಶವ ಇಟ್ಟುಕೊಂಡು ಸಂಬಂಧಿಕರು ಪ್ರತಿಭಟನೆ ಮಾಡುತ್ತಿರುವುದು.
Published on

ಬಾಗಲಕೋಟೆ: ಪಿತ್ತಕೋಶದ ಸ್ಟೋನ್‌ನಿಂದ ಬಳಲುತ್ತಿದ್ದ ವ್ಯಕ್ತಿ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬದವರು ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಬಾಗಲಕೋಟೆ ಎಪಿಎಂಸಿ ಬಳಿ ಇರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪಿಸಿ, ಮೃತ ವ್ಯಕ್ತಿಯ ಕುಟುಂಬದವರು ಶನಿವಾರ ರಾತ್ರಿ 11 ಗಂಟೆಯಾದರೂ ಶವ ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಫೀರಸಾಬ್ ನದಾಫ್ (42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ಮೃತ ವ್ಯಕ್ತಿ ಅದೇ ಖಾಸಗಿ ಆಸ್ಪತ್ರೆಯ ವೈದ್ಯರ ಕಾರು ಚಾಲಕನಾಗಿ ಕಳೆದ ಹತ್ತು ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.

ಪಿತ್ತಕೋಶದಲ್ಲಿ ಸ್ಟೋನ್ ಇದೆ ಎನ್ನುವ ಕಾರಣಕ್ಕೆ ಕಳೆದ 15 ದಿನಗಳಿಂದ ಚಿಕಿತ್ಸೆಗಾಗಿ ತಮ್ಮದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಎರಡು ಸಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರಂತೆ. ಆದರೂ ಗುಣಮುಖ ಆಗಿರಲಿಲ್ಲ. ಶನಿವಾರ ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ್ದರಂತೆ. ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಮೃತನ ಕಡೆಯವರು ವೈದ್ಯರು ನಿರ್ಲಕ್ಷ್ಯ ವಹಿಸಿ, ಸರಿಯಾಗಿ ಚಿಕಿತ್ಸೆ ನೀಡದೇ ಇರುವ ಕಾರಣಕ್ಕೆ ವ್ಯಕ್ತಿ ಮೃತನಾಗಿದ್ದಾನೆ ಎಂದು ಆರೋಪಿಸಿ, ಶವ ಆಸ್ಪತ್ರೆ ಎದುರು ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಕುಟುಂಬಕ್ಕೆ ಆಸರೆ ಆಗಿದ್ದ ವ್ಯಕ್ತಿಯೇ ಇದೀಗ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದರಿಂದ ನಮ್ಮ ಕುಟುಂಬ ಬೀದಿಗೆ ಬಂದಿದೆ. ನಮಗೆ ನ್ಯಾಯ ಸಿಗಬೇಕು ಎಂದು ಮೃತನ ಕುಟುಂಬದವರು ಶವದ ಎದುರು ಕಣ್ಣೀರು ಸುರಿಸುತ್ತ ಆಸ್ಪತ್ರೆ ಎದುರು ಕುಳಿತಿದ್ದಾರೆ.

ಮೃತನ ಸಂಬಂಧಿಕರು ಹಾಗೂ ಆಪ್ತರು ಸೇರಿ ಐವತ್ತಕ್ಕೂ ಹೆಚ್ಚು ಜನರು ರಾತ್ರಿ 11 ಗಂಟೆಯಾದರೂ ಆಸ್ಪತ್ರೆಯ ಎದುರು ಪ್ರತಿಭಟನೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net