ಪುರಸಭೆ ಎದುರು ಶವವಿಟ್ಟು ಪ್ರತಿಭಟನೆ

16 10 2025_BGR_RURAL-PAGE_02
Published on

ವಿಜಯಪುರ : ಪುರಸಭೆ ದ್ವೀತಿಯ ದರ್ಜೆ ನೌಕರ ಪವನ್​ ಜೋಷಿ ಅವರ ಮೃತದೇಹವನ್ನು ಬುಧವಾರ ಪುರಸಭೆ ಆವರಣದಲ್ಲಿಟ್ಟು ಕುಟುಂಬದವರು ಪ್ರತಿಭಟನೆ ನಡೆಸಿದರು. ಜೋಷಿ ಸಾವಿಗೆ ಪುರಸಭೆ ಸದಸ್ಯ ಎ.ಆರ್​ ಹನಿಫುಲ್ಲ, ಮಾಜಿ ಸದಸ್ಯರಾದ ಆರ್​.ಮುನಿರಾಜು ಹಾಗೂ ಜೆ.ಎನ್​ ಶ್ರೀನಿವಾಸ್​ ಕಾರಣವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕುಟುಂಬದವರು ಒತ್ತಾಯಿಸಿದರು. ಆರೋಪಿಗಳು ಅಕ್ರಮ ಖಾತೆಗಳನ್ನು ಮಾಡಿಸಿದ್ದಾರೆ, ಅಕ್ರಮ ಮಾಡಲು ಪತಿಯನ್ನು ಒತ್ತಾಯಿಸಿ ಬೆದರಿಸಿದ್ದಾರೆ ಎಂದು ಜೋಷಿ ಅವರ ಪತ್ನಿ ಅನನ್ಯಾ ಆರೋಪಿಸಿದರು. ಪತಿ ಮೊಬೈಲ್​ನಲ್ಲಿ ಪ್ರತಿಯೊಂದು ರೆಕಾರ್ಡ್​ ಆಗಿದ್ದು, ಎಲ್ಲ ವಿಷಯಗಳ ಬಗ್ಗೆ ಅದರಲ್ಲಿ ಮಾಹಿತಿ ಇದೆ, ಅದನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಂಧಿಸುವಂತೆ ಆಗ್ರಹ: ಸಬ್​ ರಿಜಿಸ್ಟ್ರಾರ್​ ಕಚೇರಿಯಿಂದ ಹಿಡಿದು ಪೊಲೀಸ್​ ಇಲಾಖೆ, ಪುರಸಭೆ ಎಲ್ಲೆಡೆ ಸದಸ್ಯನ ಶಿಫಾರಸು ನಡೆಯುತ್ತಿವೆ. ಪವನ್​ ಜೋಷಿಗೆ ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿ, ತೊಂದರೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಡಾ.ಬಿ.ಆರ್​.ಅಂಬೇಡ್ಕರ್​ ಸಮಿತಿ ಅಧ್ಯಕ್ಷ ಸಿ.ಶ್ರೀನಿವಾಸ್​ ಆಗ್ರಹಿಸಿದರು.

ಬುಧವಾರ ರಾತ್ರಿ ಅಂತ್ಯಸಂಸ್ಕಾರ : ಆರೋಪಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದ ಕುಟುಂಬಸ್ಥರು ಶವವಿಟ್ಟು ಪ್ರತಿಭಟನೆ ಮುಂದುವರೆಸಿದ್ದರು. ಪೊಲೀಸರು ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಬಳಿಕ ಬುಧವಾರ ರಾತ್ರಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮೊದಲು ಕುಟುಂಬದವರ ಒತ್ತಾಯದಂತೆ ಜೋಷಿ ಮೃತದೇಹವನ್ನು ದೇವನಹಳ್ಳಿಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಲಾಯಿತು.

ಮರುಪರಿಶೀಲನೆ ಮಾಡಿ : ಪುರಸಭೆಯಲ್ಲಿ ಬಿ ಖಾತಾ ಆಂದೋಲನ ಪ್ರಾರಂಭವಾದಾಗಿನಿಂದ ಸಾಕಷ್ಟು ಅಕ್ರಮಗಳು ನಡೆದಿದ್ದು, ಎಲ್ಲ ಖಾತೆಗಳನ್ನು ಅಮಾನತು ಮಾಡಬೇಕು, ಇಲ್ಲವೇ ಎಲ್ಲ ಖಾತೆಗಳ ಬಗ್ಗೆ ಉನ್ನತ ಅಧಿಕಾರಿಗಳು ಮರುಪರಿಶೀಲನೆ ಮಾಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಜಿ.ಎಂ.ಚಂದ್ರು ಒತ್ತಾಯಿಸಿದರು.

ಏನಿದು ಪ್ರಕರಣ? : ಅ.12ರಂದು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯದಲ್ಲಿದ್ದಾಗ ಜೋಷಿ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು. ಸೋಮವಾರ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದರು. ಮಂಗಳವಾರ ಮೃತದೇಹದ ಅಂಗಾಂಗ ದಾನ ಪ್ರಕ್ರಿಯೆ ಪೂರೈಸಿ ಬುಧವಾರ ಕುಟುಂಬದವರ ವಶಕ್ಕೆ ನೀಡಲಾಗಿತ್ತು. ಅಂತ್ಯಸಂಸ್ಕಾರಕ್ಕೂ ಮುನ್ನ ಕುಟುಂಬದವರು ಪುರಸಭೆ ಆವರಣದಲ್ಲಿ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net