

ವಿಜಯಪುರ: ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ದಂಧೆಗೆ ಬಲಿಯಾದ ಅಮಾಯಕನ ಶವ ಇಟ್ಟುಕೊಂಡು ಮಂಗಳವಾರ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ಮೇ 1 ರಂದು ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಬೂಬಕ್ಕರ ಅಂಬರಖಾನೆ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಗ್ಯಾಸ್ ರಿಫಿಲ್ಲಿಂಗ್ ಮಾಡುವ ವೇಳೆ ಸ್ಪೋಟ ಸಂಭವಿಸಿತ್ತು. ಈ ವೇಳೆ ಸಲ್ಮಾನ್ ಇನಾಂದಾರ್ (24) ಎಂಬ ಯುವಕ ಸೇರಿ ಮೂವರಿಗೆ ಸುಟ್ಟ ಗಾಯಗಳಾಗಿದ್ದವು. ಕೂಡಲೇ ಸಲ್ಮಾನ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಸಲ್ಮಾನ್ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಘಟನೆಗೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ದಂಧೆಯೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆರೋಪಿಸಿದರು.
ಅಲ್ಲದೇ, ಗ್ಯಾಸ್ ರಿಫಿಲ್ಲಿಂಗ್ ದಂಧೆಯಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ದಂಧೆಗೆ ಕಡಿವಾಣ ಹಾಕಿಲ್ಲ. ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ದಾಳಿ ನಡೆಸುವ ಅಧಿಕಾರಿಗಳು ಬಳಿಕ ದಂಧೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ. ಪರಿಣಾಮ ಗಲ್ಲಿ ಗಲ್ಲಿಗಳಲ್ಲಿಯೂ ಗ್ಯಾಸ್ ರಿಫಿಲ್ಲಿಂಗ್ ದಂಧೆ ಜೋರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಮನೆ ಮುಂದೆಯೇ ಅನಧಿಕೃತವಾಗಿ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಧಿಕಾರಿಗಳಿಗೆ ಗ್ಯಾಸ್ ರಿಫಿಲ್ಲಿಂಗ್ ದಂಧೆಕೋರರಿಂದ ತಿಂಗಳಿಗೆ ಮಾಮೂಲು ಹೋಗುತ್ತಿದೆ. ಇಲಾಖೆ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಇಷ್ಟೆಲ್ಲಾ ದಂಧೆ ನಡೆಯುತ್ತಿದ್ದರೂ ರಾಜಕಾರಣಿಗಳು ಹಾಗೂ ಅಧಿಕಾರಿಗಳಿದ್ದು ಪ್ರಯೋಜನವೇನು? ಅಮಾಯಕರ ಬಲಿಯಾಗುವವರೆಗೂ ದಂಧೆಗೆ ಕಡಿವಾಣ ಬೀಳುವುದಿಲ್ಲವೆಂದರೆ ಇನ್ನೂ ಯಾವ ವ್ಯವಸ್ಥೆಯಲ್ಲಿದ್ದೇವೆ? ಯಾವ ಪುರುಷಾರ್ಥಕ್ಕೆ ಆಡಳಿತ ವ್ಯವಸ್ಥೆ ಇರಬೇಕು? ಎಂದೆಲ್ಲಾ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಡಿವೈಎಸ್‌ಪಿ ಬಸವರಾಜ ಯಲಿಗಾರ ಹಾಗೂ ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಘಟನೆಗೆ ಕಾರಣರಾದವರ ಮೇಲೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಅಕ್ರಮ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ನಿರಂತರವಾಗಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು ಅಕ್ರಮ ದಂಧೆಗೆ ಕಡಿವಾಣ ಬೀಳುವುದರ ಜೊತೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಕ್ರಮವಾಗಬೇಕು, ಮೃತನ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ವಿನಯಕುಮಾರ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಈಗಾಗಲೇ ಸೇಲ್ಸ್ ಮ್ಯಾನೇಜರ್‌ಗಳ ಜೊತೆ ಮಾತನಾಡಿದ್ದೇನೆ. ಎಫ್‌ಐಆರ್ ಆಗಿದೆ. ಸಂಬಂಧಪಟ್ಟ ಡೀಲರ್‌ಗಳು ಪರಿಶೀಲನೆ ನಡೆಸುವರು. ಇನ್ಸುರೆನ್ಸ್ ಪಾವತಿ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ. ಕಟ್ಟಡಗಳ ಶಾಶ್ವತ ತೆರವಿಗೆ ಪಾಲಿಕೆಗೆ ಪತ್ರ ಕೂಡ ಬರೆದಿದ್ದೇನೆ ಎಂದರು.
ಮುಂದುವರಿದು ಅಕ್ರಮ ದಂಧೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಸಹ ಬಂದಿವೆ. ಸಿಟಿಯಲ್ಲಿ ದಾಳಿ ನಿರಂತರವಾಗಿದೆ. ಏಪ್ರಿಲ್‌ನಲ್ಲಿ 14 ಎಫ್‌ಐಆರ್ ದಾಖಲಿಸಿದ್ದೇವೆ. ಜೊತೆಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದು, ರಸ್ತೆಯಲ್ಲಿಯೇ ಸಣ್ಣ ಸಣ್ಣ ಅಂಗಡಿಗಳಿವೆ. ದಂಧೆಗೆ ಮುಕ್ತಿ ಸಿಗಬೇಕೆಂದರೆ ಆ ಅಂಗಡಿ ಸಂಪೂರ್ಣ ತೆರವಾಗಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು. ಕಾನೂನು ಕ್ರಮವಾಗಬೇಕು. ಈ ನಿಟ್ಟಿನಲ್ಲಿ ಹೆಸ್ಕಾಂ, ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೂ ಗಮನಕ್ಕೆ ತಂದಿದ್ದೇವೆ. ನಾಲ್ಕೈದು ತಿಂಗಳ ಹಿಂದೆ ಆಹಾರ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ಕೂಡ ನಡೆದಿದೆ. ಗೋದಾವರಿ ಬಳಿ ದಾಳಿ ನಡೆದಾಗ ಅತ್ತಾರ ಎಂಬ ಅಧಿಕಾರಿ ಮೇಲೆ ಹಲ್ಲೆಯಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಇಷ್ಟಾದರೂ ಬಿಟ್ಟಿಲ್ಲ. ಎಫ್‌ಐಆರ್ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.