

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಒನ್ ಕೇಂದ್ರಗಳನ್ನು ಬಂದ್ ಮಾಡಿದ ಅದರ ಮಾಲೀಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ವೇಳೆ ಹಣ ಪಡೆಯುತ್ತಿದ್ದಾರೆಂಬ ಆರೋಪದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಲಾಗುತ್ತಿದೆ. ಅಂಗಡಿ ಬಾಡಿಗೆ ಪಡೆದು, ವಿದ್ಯುತ್ ಬಿಲ್, ಪ್ರಿಂಟರ್, ಲ್ಯಾಮಿನೇಷನ್ ಮಷಿನ್ ಅಂತ ಹಣ ಖರ್ಚು ಮಾಡಿ ಗ್ರಾಮ ಒನ್ ಕೇಂದ್ರ ತೆರೆದಿರುತ್ತೇವೆ. ಲ್ಯಾಮಿನೇಷನ್, ಪ್ರಿಂಟ್‌ಗೆ ಅಂತ ಹಣ ಪಡೆದರೆ ಕೆಲವರು, ಅರ್ಜಿಗಾಗಿ ಹಣ ಪಡೆದಿದ್ದಾರೆ ಎಂದು ಬಿಂಬಿಸಿ ದೂರು ನೀಡುತ್ತಿದ್ದಾರೆ. ಇದರಿಂದ ಪ್ರಕರಣ ದಾಖಲಾಗುತ್ತಿವೆ. ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಮಾಡುತ್ತೇವೆ. ಕೆಲವರು ಗಲಾಟೆ ಮಾಡಿ ಮೇಲೆ ಹಲ್ಲೆ ಮಾಡುತ್ತಾರೆ. ಸರ್ಕಾರ ಒಂದು ಅರ್ಜಿಗೆ ನೀಡುವ ಸಹಾಯ ಧನ 20 ರೂ. ಅದರಲ್ಲಿ ಟ್ಯಾಕ್ಸ್ ತೆಗೆದು 12 ರೂ. ಬರುತ್ತದೆ. ಆ ಹಣ ಕೂಡ ಯಾವಾಗ ಬರುತ್ತದೆ ಗೊತ್ತಿಲ್ಲ. ಗೃಹಜ್ಯೋತಿ ನೋಂದಣಿ ಸಲ್ಲಿಕೆಗೂ ಹೀಗೆ ಹೇಳಿದ್ದರು. ಆದರೆ, ಇನ್ನೂ ನಮಗೆ ಹಣ ಬಂದಿಲ್ಲ. ಹೀಗೆ ಆದರೆ, ಗ್ರಾಮ ಒನ್ ಬಂದ್ ಮಾಡಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರ ನಮಗೆ ನ್ಯಾಯ ಒದಗಿಸಿ 50ರಿಂದ 100 ರೂ. ಸಹಾಯಧನ ಕೊಡಬೇಕು. ಇಲ್ಲ ಸರ್ಕಾರದಿಂದ ನಮಗೆ ಸಂಬಳ ನೀಡಲಿ ಎಂದು ಒತ್ತಾಯಿಸಿದರು.
ಮಹಾಂತೇಶ ಬೆಣ್ಣಿ ಮಾತನಾಡಿ, 2 ಲಕ್ಷ ರೂ. ಹೂಡಿಕೆ ಮಾಡಿ ಗ್ರಾಮ ಒನ್ ತೆರೆದಿದ್ದೇವೆ. ಕನಿಷ್ಠ 15-18 ಸಾವಿರ ರೂ. ಗೌರವ ವೇತನ ನೀಡಬೇಕು. ಇವರು ಕೊಡುವ 12 ರೂ. ನಮ್ಮ ಜೀವನ ನಡೆಸಲು ಸಾಧ್ಯವಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಕೇಂದ್ರ ಆರಂಭಿಸುವುದಿಲ್ಲ ಎಂದರು.
ಅಭಿಲಾಷ ಮರಕಟ್ಟಿ, ಕಿರಣ ಅಂಗಡಿ, ಪ್ರವೀಣ ಕಬ್ಬೂರ, ಅಜಿತ್ ಇದಲಿ, ಪ್ರಜ್ವಲ ಅಂಗಡಿ, ದೇಮಪ್ಪ ಬೂದಿಹಾಳ ಇತರರಿದ್ದರು.