ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ

raichur
raichur
Published on

 ರಾಯಚೂರು ಮರಣ ಮತ್ತು ಉಪದಾನ ಯೋಜನೆಯನ್ನು ವಿಸ್ತರಿಸುವುದು, ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯತಿ ನೀಡುವುದು, ಹೆಚ್ಚುವರಿ ಕಾರ್ಯಭಾರಕ್ಕೆ ಶೇ.10ರಷ್ಟು ವಿಶೇಷ ಭತ್ಯೆ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪದಾಧಿಕಾರಿಗಳು ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಅನಿರ್ಧಿಷ್ಠಾವಧಿ ಸತ್ಯಾಗ್ರಹ ನಡೆಸಿದರು.

ರಾಜ್ಯದಲ್ಲಿರುವ ಎಲ್ಲಾ ವಸತಿ ಶಾಲೆಗಳನ್ನು ಒಂದೆ ಸೂರಿನಡಿ ತರುವ ಉದ್ದೇಶದಿಂದ ಮತ್ತು ಏಕರೂಪದ ಆಡಳಿತ ನಿರ್ವಹಣೆ ಮಾಡಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು 1999ರಲ್ಲಿ ಸ್ಥಾಪಿಸಲಾಗಿದ್ದು, ಅದರಂತೆ ಎಲ್ಲಾ ವಸತಿ ಶಾಲೆಗಳ ನಿರ್ವಹಣೆಯನ್ನು ಈ ಸಂಘಕ್ಕೆ ವಹಿಸಲಾಗಿತ್ತು. ಈ ಸಂಘದಲ್ಲಿ 6400 ಕ್ಕೂ ಹೆಚ್ಚಿನ

ಖಾಯಂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ಆದರೆ ಸಿಬ್ಬಂದಿಗಳು ಹಲವು ಸೇವಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.

ವಸತಿ ಶಾಲೆ ನೌಕರರಿಗೆ ಎನ್‌ಪಿಎಸ್ ಯೋಜನೆಗೆ ಒಳಪಡುವ ರಾಜ್ಯ ಸರ್ಕಾರಿ ನೌಕರರಿಗೆ 2006ರಿಂದ ಅನ್ವಯವಾಗುವಂತೆ ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಆದರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನೌಕರರಿಗೆ ಈ ಯೋಜನೆಯ ಸೌಲಭ್ಯವನ್ನು ನೀಡಲಾಗಿಲ್ಲ ಇದು ಸಹಜ ನ್ಯಾಯದ ಉಲ್ಲಂಘನೆಯಾಗಿದ್ದು, ಕೂಡಲೇ ವಸತಿ ಶಿಕ್ಷಣ ಸಂಗಸ್ಥೆಗಳ ನೌಕರರಿಗೆ ಮರಣ ಮತ್ತು ನಿವೃತ್ತಿ ಉಪದಾನ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಕ್ರೈಸ್ ಖಾಯಂ ಬೋಧಕರು, ಬೋಧಕೇತರ ವಸತಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಗೃಹಗಳಲ್ಲಿ ವಾಸವಿರಬೇಕೆಂದು ನಿರ್ದೇಶಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಸತಿ ಗೃಹಗಳಿಗೆ ಕ್ರೈಸ್ ನೌಕರರು ಹೆಚ್ಚಿನ ಬಾಡಿಗೆ ಪಾವತಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕ್ರೈಸ್ ನೌಕರರಿಗೆ ಹಂಚಿಕೆ ಮಾಡಲಾದ ವಸತಿ ಗೃಹಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಕಡಿತಗೊಳಿಸಬಾರದೆಂದು ಒತ್ತಾಯಿಸಿದರು. ನವೋದಯ ವಿದ್ಯಾಲಯಗಳು, ಏಕಲವ್ಯ ಮಾದರಿ ವಸತಿ ಶಾಲೆಗಳ ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಮೂಲವೇತನದ ಶೇ.10ರಷ್ಟು ವಿಶೇಷ ಭತ್ಯೆಯನ್ನು ನೀಡಲಾಗುತ್ತಿದೆ. ಶಿಕ್ಷಣ ಇಲಾಖೆಯ ಶಿಕ್ಷಕರಿಗಿಂತ ವಸತಿ ಶಾಲೆಗಳ ಶಿಕ್ಷಕರಿಗೆ ಹೆಚ್ಚಿನ ಕಾರ್ಯಾಭಾರವಿರುವುದರಿಂದ ಕ್ರೈಸ್ ನೌಕರರಿಗೆ ಶೇ10ರಷ್ಟು ವಿಶೇಷ ಭತ್ಯೆಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಶೈಲ ನಾಯಕ, ರುದ್ರೇಶ, ಸಾಬಗೌಡ, ರಾದಕೃಷ್ಣ, ಈರಣ್ಣ, ಸಂಗಮೇಶ ಕೊಳ್ಳಿ, ಅಂಜನಾ, ವೀರೇಶ ಯಮನೂರಪ್ಪ ಗಲಗಿನ್, ಕವಿತಾ, ವೀಣಾ ಸೇರಿದಂತೆ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net