ನಯನಜ ಕ್ಷತ್ರಿಯ ಸಂಘದಿಂದ ಪ್ರತಿಭಟನೆ

07 yelandur 01
Published on

ಯಳಂದೂರು: ಸವಿತಾ ಸಮಾಜವನ್ನು ಹಿಂದುಳಿದ ಜಾತಿಯ ಪ್ರವರ್ಗ 2 ಎ ನ 8ನೇ ಕಾಲಂನಲ್ಲಿ ಸೇರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ನಯನಜ ಕ್ಷತ್ರಿಯ ಸಂಘದ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.


ಬಳೇಪೇಟೆಯ ಸವಿತಾ ಸಮಾಜದ ಸಮುದಾಯ ಭವನದಿಂದ ಮೆರವಣಿಗೆಯಲ್ಲಿ ಹೊರಟು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಘದ ಸದಸ್ಯರು ಹಾಗೂ ತಾಲೂಕಿನ ಸವಿತಾ ಸಮಾಜದವರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.


ಸಂಘದ ಅಧ್ಯಕ್ಷ ಪಿ.ಸಿ.ಶ್ರೀಕಂಠಸ್ವಾಮಿ ಮಾತನಾಡಿ, ಸವಿತಾ ಸಮಾಜದವರು ಇಂದಿಗೂ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಆಗಾಗ ಈ ಜಾತಿಯನ್ನು ನಿಂದಿಸುತ್ತಲೇ ಬರುತ್ತಿದೆ. ಹಾಗಾಗಿ ಜಾತಿ ನಿಂದನೆ ಪದವನ್ನು ಬಳಕೆ ಮಾಡಲಾಗುತ್ತಿದ್ದು, ಅದನ್ನು ದೌರ್ಜನ್ಯ ಕಾಯ್ದೆಯಡಿ ಸೇರಿಸಬೇಕು, ಮೀಸಲಾತಿ ಹೆಚ್ಚಿಸಬೇಕು, ಜಯಪ್ರಕಾಶ್ ಹೆಗ್ಡೆ ವರದಿ ಆಧರಿಸಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಕ್ಷೌರಿಕ ವೃತ್ತಿಯನ್ನು ನಗರ ಪ್ರದೇಶಗಳಲ್ಲಿ ಇತರ ಜನಾಂಗದವರೂ ಮಾಡುತ್ತಿದ್ದಾರೆ. ಅವರಿಗೆ ಪರವಾನಗಿ ನೀಡುವ ಮೊದಲು ಕಡ್ಡಾಯವಾಗಿ ಅವರು ಆ ಸ್ಥಳದಲ್ಲಿ 5 ವರ್ಷ ವಾಸವಿರುವ ಪ್ರಮಾಣಪತ್ರ ನೀಡುವ ಕಾನೂನು ರೂಪಿಸಬೇಕು. ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ಕ್ಷೌರಿಕ, ನಾದಸ್ವರ, ಡೋಲು ಬಾರಿಸುವ ತರಬೇತಿ ಶಾಲೆಗಳನ್ನು ತೆರೆಯಬೇಕು, ಜಾತಿ ಪ್ರಮಾಣ ಪತ್ರದ ಮೇಲೆ ಉಚಿತ ಆರೋಗ್ಯ ವಿಮೆ ಮಾಡಿಸಬೇಕು, ಸವಿತಾ ಮಹರ್ಷಿ ಜಯಂತಿಯಂದು ಸವಿತಾ ರತ್ನ ಪ್ರಶಸ್ತಿಯನ್ನು ಘೋಷಿಸಬೇಕು. ಬೆಂಗಳೂರಿನ ಪ್ರಮುಖ ರಸ್ತೆಗೆ ಸವಿತಾ ಮಹರ್ಷಿ ಹೆಸರನ್ನು ಇಡಬೇಕು. ರಾಜ್ಯ, ಕೇಂದ್ರ ಸರ್ಕಾರದ ವಸತಿ ಶಾಲೆಗಳಲ್ಲಿ ನಮ್ಮ ಸಮುದಾಯದವರನ್ನೇ ಕ್ಷೌರಿಕರಾಗಿ ನೇಮಿಸಿಕೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.


ಉಪಾಧ್ಯಕ್ಷ ಬಸವಣ್ಣ, ರಾಮು, ಕೆ.ಎಂ.ವೀರಶೆಟ್ಟಿ, ರೇವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net