ನಾಳೆ ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನೆ

kantesh
Published on

ಶಿವಮೊಗ್ಗ: ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಹಿಂದುಗಳು ಬದುಕುವುದೇ ದುಸ್ತರವಾಗಿದೆ. ಮುಸ್ಲಿಂ ಓಲೈಕೆ ಮತ್ತು ತುಷ್ಟೀಕರಣದಿಂದ ಹಿಂದುಗಳು ತಮ್ಮ ಹಬ್ಬಗಳನ್ನು ಆಚರಿಸುವುದೇ ಕಷ್ಟವಾಗಿದೆ. ಇದಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದು ಜಿಪಂ ಮಾಜಿ ಸದಸ್ಯ, ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಮುಸ್ಲಿಮರು ನಡೆಸಿದ ದಾಳಿಯನ್ನು ಖಂಡಿಸಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸೆ.10ರ ಬೆಳಗ್ಗೆ 10.30ಕ್ಕೆ ಡಿಸಿ ಕಚೇರಿ ಎದುರು ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಂದುಗಳು ಗಣೇಶ ಉತ್ಸವ, ಹನುಮ ಜಯಂತಿ ಮತ್ತಿತರ ಉತ್ಸವಗಳನ್ನು ನಡೆಸುವುದು ಕಾಂಗ್ರೆಸ್ ಆಡಳಿತದಲ್ಲಿ ಅಪರಾಧವೇ? ಹಿಂದುಗಳು ನಡೆಸುವ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರದು ಎಂದಾದರೆ, ಮಸೀದಿಗಳು ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿವೆಯೆ ಎಂದು ಪ್ರಶ್ನಿಸಿದರು.

ಶಾಂತಿಯುತವಾಗಿ ಸಾಗುತ್ತಿದ್ದ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ಎಸೆದು, ಗಲಭೆ ಸೃಷ್ಟಿಸಿ, ವಿದ್ಯುತ್ ಕಡಿತಗೊಳಿಸಲು ಕುಮ್ಮಕ್ಕು ನೀಡಿದವರು ಯಾರು? ನ್ಯಾಯ ಕೇಳಿ, ಪ್ರತಿಭಟನೆ ನಡೆಸಿದ ಹಿಂದುಗಳ ಮೇಲೆ ಪೊಲೀಸರು ಮನಬಂದಂತೆ ಲಾಠಿ ಪ್ರಹಾರ ಮಾಡಲು ನಿರ್ದೇಶನ ನೀಡಿದವರು ಯಾರು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಈ ರೀತಿ ಗಲಭೆ ಸೃಷ್ಟಿಸುತ್ತಿರುವ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಬಹುಸಂಖ್ಯಾತ ಹಿಂದುಗಳ ಆಚರಣೆಗಳಿಗೆ ಮುಂದಿನ ದಿನಗಳಲ್ಲಿ ಮತಾಂಧರಿಂದ ಯಾವುದೇ ತೊಂದರೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಇ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಮೋಹನ್‌ರಾವ್ ಜಾಧವ್, ವೆಂಕಟೇಶ್, ಮುರುಗೇಶ್, ಚಿದಾನಂದ, ಕುಬೇರಪ್ಪ, ರುದ್ರೇಶ್, ಶಿವಾಜಿ, ಅ.ಮ.ಪ್ರಕಾಶ್, ರಾಜು, ರುದ್ರಯ್ಯ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net