

ಮೈಸೂರು: ಮಹಿಳೆಯರ ಕುರಿತು ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಮಾನಸಗಂಗೋತ್ರಿಯ ಅಂಬೇಡ್ಕರ್ ಪ್ರತಿಮೆ ಜಮಾವಣೆಗೊಂಡ ಪ್ರತಿಭಟನಾಕಾರರು, ಮುನಿರತ್ನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ದಲಿತರ ಮೇಲೆ ಇನ್ನೂ ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿವೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಮುನಿರತ್ನ ಅವರು ದಲಿತರಿಂದ ಮತ ಪಡೆದು ಶಾಸಕರಾಗಿ ಅದೇ ಸಮುದಾಯದ ಕುರಿತು ಕೀಳಾಗಿ ಮಾತನಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ಇದು ಖಂಡನೀಯ. ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯಾಧ್ಯಕ್ಷ ಕಲ್ಲಳ್ಳಿ ಕುಮಾರ್ ಮಾತನಾಡಿ, ಮುನಿರತ್ನ ಲಂಚಕೋರಲಾಗಿದ್ದು, ಹೆಣ್ಣು ಮಕ್ಕಳನ್ನು ತನ್ನ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಿರುವ ಆರೋಪವೂ ಇವರ ಮೇಲಿದೆ. ಅನೇಕ ಅನ್ಯಾಯ, ಅಕ್ರಮಗಳಲ್ಲಿ ಭಾಗಿಯಾಗಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಪ್ರಕರಣ ಸಹ ದಾಖಲಾಗಿದ್ದು, ಇಂತಹ ವ್ಯಕ್ತಿಯನ್ನು ಗಡಿಪಾರು ಮಾಡಲು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಮಲ್ಲೇಶ್ ಲಿಂಗರಾಜು, ಮುಖಂಡರಾದ ವರಹಳ್ಳಿ ಆನಂದ, ವಜ್ರಮುನಿ, ಜಗದೀಶ, ವಿಶ್ವ ಪ್ರಸಾದ್, ನವೀನ ಮುಂತಾದ ಸಂಶೋಧನ ವಿದ್ಯಾರ್ಥಿಗಳು ಇದ್ದರು.