

ಮೂಡುಬಿದಿರೆ: ಜನನ ಮರಣ ನೋಂದಣಿ ಕಾಯ್ದೆ ಬಗ್ಗೆ ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ಶೀಘ್ರ ಹಿಂಪಡೆಯಬೇಕೆಂದು ಆಗ್ರಹಿಸಿ ಮೂಡುಬಿದಿರೆ ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಸಂಘದ ಅಧ್ಯಕ್ಷ ಎಂ.ಕೆ. ದಿವಿಜೇಂದ್ರ ಕುಮಾರ್ ಮಾತನಾಡಿ, ಕಾಯ್ದೆಯನ್ನು ತಿದ್ದುಪಡಿಗೊಳಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವ ಹುನ್ನಾರ ನಡೆದಿದೆ. ತಿದ್ದುಪಡಿಯ ಅಧಿಕಾರವನ್ನು ಸಹಾಯಕ ಆಯುಕ್ತರಿಗೆ ವರ್ಗಾಹಿಸುವುದರಿಂದ ಸಾರ್ವಜನಿಕರು ಜನನ ಮರಣ ನೋಂದಣಿ ವಿಚಾರದಲ್ಲಿ ವರ್ಷಗಟ್ಟಲೆ ಅಲೆದಾಡಬೇಕಾದ ದುಸ್ಥಿತಿ ಬರಲಿದೆ. ಇದರಿಂದಾಗಿ ಪ್ರಕರಣ ವಹಿಸಿಕೊಂಡ ವಕೀಲರ ಮೇಲೆ ಕೂಡ ಸಾರ್ವಜನಿಕರು ಭ್ರಷ್ಟಾಚಾರದ ಸಂಶಯದಿಂದ ನೋಡುವಂತಾಗುತ್ತದೆ. ಆದುದರಿಂದ ಸರ್ಕಾರ ಈ ಸುತ್ತೋಲೆಯನ್ನು ಹಿಂಪಡೆದು ನ್ಯಾಯಾಂಗದ ವಿಚಾರಣೆಯನ್ನು ಮುಂದುವರಿಸಬೇಕು. ಹೀಗಾಗಿ ಈ ಬಗ್ಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರವು ಶೀಘ್ರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಪ್ರವೀಣ್ ಎಸ್ ಲೋಬೋ, ಕೋಶಾಧಿಕಾರಿ ಕಿಶೋರ್, ಹಿರಿಯ ವಕೀಲರಾದ ಎಂ.ಎಸ್. ಕೋಟ್ಯಾನ್, ಹರೀಶ್ ಪಿ. ಸಹಿತ ಸದಸ್ಯರು ಹಾಜರಿದ್ದರು.