

ವಿಜಯವಾಣಿ ಸುದ್ದಿಜಾಲ ವಿಟ್ಲ
ಉಡುಪಿ-ಕಾಸರಗೊಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಮಾರ್ಗ ರಚನೆಗಾಗಿ ಕಂಪನಿ ಪ್ರತಿನಿಧಿಗಳು ವೀರಕಂಬ ಅರಣ್ಯ ವ್ಯಾಪ್ತಿಯಲ್ಲಿ ಗೋಪುರ ಸ್ಥಳ ಗುರುತಿಸಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರು ಕಂಪನಿ ಪ್ರತಿನಿಧಿಗಳಿಗೆ ದಿಗ್ಬಂಧನ ಹಾಕಿದ ಘಟನೆ ನಡುವಳಚ್ಚಿಲ್‌ನಲ್ಲಿ ನಡೆದಿದೆ.
10ರಿಂದ 15 ಮಂದಿ ವಿವಿಧ ವಾಹನಗಳಲ್ಲಿ ಆಗಮಿಸಿ ಒಳ ರಸ್ತೆಯಲ್ಲಿ ತೆರಳುವಾಗ ಸ್ಥಳೀಯರಿಗೆ ಅನುಮಾನ ಬಂತು. ಪ್ರಶ್ನಿಸಿದಾಗ ವೀರಕಂಬ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಮಾರ್ಗದ ಸರ್ವೇಗೆ ಬಂದಿದ್ದೇವೆ ಎಂದು ಅವರು ತಿಳಿಸಿದ್ದು, ರೈತರು ಹಾಗೂ ಸ್ಥಳೀಯರನ್ನು ಕೆರಳಿಸಿದೆ.
ವಿಧಾನ ಸೌಧದಲ್ಲಿ ಬಂಟ್ವಾಳ ಶಾಸಕರು ವಿದ್ಯುತ್ ಮಾರ್ಗದ ಬಗ್ಗೆ ಮಾತನಾಡಿದಾಗ ಇಂಧನ ಸಚಿವರು ಸದ್ಯ ಕಾಮಗಾರಿಯನ್ನು ಸ್ಥಗಿತ ಮಾಡುವಂತೆ ಸೂಚಿಸಲಾಗಿದೆ ಎಂಬ ಉತ್ತರ ನೀಡಿದ್ದರು. ರೈತರ ಸಭೆಯ ಬಳಿಕವೇ ಮುಂದಿನ ನಡೆ ಎಂದು ಹೇಳಿ ಈಗ ಗೌಪ್ಯವಾಗಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದು ಏಕೆ ಎಂದು ಸ್ಥಳಕ್ಕೆ ಬಂದವರನ್ನು ತರಾಟೆಗೆ ತೆಗೆದುಕೊಂಡರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಿಮಿಸಿ ಅರಣ್ಯ ವ್ಯಾಪ್ತಿಯಲ್ಲಿ ಗುರುತು ಮಾಡಲಾಗುತ್ತಿತ್ತು ಎಂದು ತಿಳಿಸಿದರು. ಕಂಪನಿಯ ಕಡೆಯಿಂದ ಬಂದವರು ಜಿಲ್ಲಾಧಿಕಾರಿಯವರ ಅನುಮತಿ ಇಲ್ಲದೆ ಸ್ಥಳಕ್ಕೆ ಬರುವುದಿಲ್ಲ ಎಂದು ಪತ್ರ ನೀಡಿದ ಬಳಿಕ ಅವರನ್ನು ಸ್ಥಳದಿಂದ ಬಿಟ್ಟು ಕಳುಹಿಸಲಾಯಿತು.