

ಮಳವಳ್ಳಿ: ತಾಲೂಕಿನ ಬಿ.ಜಿ. ಪುರ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಸಾಹಿತಿ ಕೆ.ಎಸ್.ಭಗವಾನ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರಮುಖ ವೃತ್ತದಲ್ಲಿ ಭಗವಾನ್ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಗ್ರಾಮದಲ್ಲಿರುವ ನಾಡ ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು.
ಪ್ರಗತಿಪರ ಹೋರಾಟಗಾರರೆಂಬ ಮುಖವಾಡ ಹಾಕಿ ಕೆಲವರು ಸಮಾಜದೊಳಗೆ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಜಾತಿ-ಜಾತಿ ನಡುವೆ ವೈರತ್ವ ಹುಟ್ಟು ಹಾಕುವ ವಿಷ ಮನಸ್ಥಿತಿಯ ಕೆ.ಎಸ್.ಭಗವಾನ್‌ನಂತಹವರಿಗೆ ವೇದಿಕೆ ಏರುವ ಅವಕಾಶ ನೀಡುವುದು ಅಕ್ಷಮ್ಯ ಅಪರಾಧ. ಈ ಹಿಂದಿನಿಂದಲೂ ಧಾರ್ಮಿಕ ನಂಬಿಕೆ, ಶ್ರೀರಾಮ, ಚಾಮುಂಡೇಶ್ವರಿ ದೇವತೆಗಳನ್ನು ನಿಂದಿಸುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿ ಕದಡುವ ಮನಸ್ಥಿತಿವುಳ್ಳ ವ್ಯಕ್ತಿಗಳಿಗೆ ಕಡಿವಾಣ ಹಾಕಬೇಕಿದ್ದು, ಭಗವಾನ್‌ರನ್ನು ಈ ಕೂಡಲೇ ಬಂಧಿಸಬೇಕು. ಭವಿಷ್ಯದ ದಿನಗಳಲ್ಲಿ ಯಾವುದೇ ವೇದಿಕೆಯನ್ನು ಏರದಂತೆ ನಿಷೇಧಿಸಬೇಕು ಎಂದು ಉಪ ತಹಸೀಲ್ದಾರ್ ಕೆ.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಕರಿಸಿದ್ದಯ್ಯ, ಜೆ.ಕುಮಾರ್, ಬಸವರಾಜು, ನಾಗರಾಜು, ದೀಪು, ಚಂದ್ರು, ರಾಜು, ಅರುಣ್, ಶಿವಾಜಿ, ಜವರಶೆಟ್ಟಿ ಸೇರಿದಂತೆ ಇತರರು ಇದ್ದರು.