ಗ್ರಿಡ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ

Protest in Yallapura
Published on

ಯಲ್ಲಾಪುರ: ತಾಲೂಕಿನ ಗುಳ್ಳಾಪುರದಲ್ಲಿನ 33/11 ಕೆ.ವಿ ವಿದ್ಯುತ್ ಗ್ರಿಡ್​ನಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗದೇ ಇರುವುದನ್ನು ಖಂಡಿಸಿ ಇಡಗುಂದಿ, ಸುಂಕಸಾಳ ಹಾಗೂ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ನಾಗರಿಕರು ಗ್ರಿಡ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮೂರು ತಿಂಗಳುಗಳಿಂದ ವಿದ್ಯುತ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಡಗುಂದಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಶೆಟ್ಟಿ ಮಾತನಾಡಿ, ಗ್ರಿಡ್​ನಲ್ಲಿ ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳಿಲ್ಲ. ಈ ಗ್ರಿಡ್ ಗೆ ವಿಶೇಷ ಪರಿಣತಿ ಹೊಂದಿದ ಲೈನ್​ವುನ್, ಸೆಕ್ಷನ್ ಆಫಿಸರ್​ಗಳನ್ನು ನೇಮಿಸಬೇಕು. ಬೇಸಿಗೆಯಲ್ಲಿ ಸರಿಯಾಗಿ ಲೈನ್ ಕಟಿಂಗ್ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ ಕನಕನಹಳ್ಳಿ ಮಾತನಾಡಿ, ವಿದ್ಯುತ್ ಸರಬರಾಜು ವಿಚಾರದಲ್ಲಿ ಜಿಲ್ಲೆಗೆ ಇಲಾಖೆಯು ಹೆಚ್ಚಿನ ಪ್ರಾಶಸ್ಱ ಕೊಡಬೇಕಿದೆ. ವಿದ್ಯುತ್ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೆಸ್ಕಾಂ ಎಂ.ಡಿ. ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸುಂಕಸಾಳ ಗ್ರಾ.ಪಂ ಉಪಾಧ್ಯಕ್ಷ ಸದಾನಂದ ನಾಯಕ ಮಾತನಾಡಿ, ಇಲಾಖೆಯ ಅಧಿಕಾರಿಗಳು ಮಳೆಗಾಲ ಪೂರ್ವದಲ್ಲಿ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ, ಅಪಾಯಕಾರಿ ಮರಗಳ ಟೊಂಗೆಗಳನ್ನು ಸಮರ್ಪಕವಾಗಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಡೋಂಗ್ರಿ ಗ್ರಾ.ಪಂ. ಅಧ್ಯಕ್ಷ ವಿನೋದ ಭಟ್ಟ ಮಾತನಾಡಿ, ನುರಿತ ಗ್ಯಾಂಗ್​ವುನ್​ಗಳನ್ನು ನೇಮಿಸಬೇಕು. ಇಲ್ಲವೇ ಈಗಿರುವವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಗ್ರಾಮಸ್ಥರು ಹೆಸ್ಕಾಂಗೆ ಸಂಬಂಧಿಸಿದಂತೆ ತಮ್ಮ ತಮ್ಮ ಊರಿನ ಸಮಸ್ಯೆಗಳನ್ನು, ಬೇಡಿಕೆಗಳ ಮನವಿ ಸಲ್ಲಿಸಿದರು. ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಶೀಘ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಸ್ಥಳೀಯರಾದ ಜಿ.ಆರ್. ಭಟ್ಟ, ನಾಗಪತಿ ಹೆಗಡೆ ಕಾಗೇರಿ, ಆನಂದರಾಯ ಗೊಳಸಂಗಿ, ನಾಗರಾಜ ಹೆಗಡೆ, ಇಡಗುಂದಿ, ಸುಂಕಸಾಳ, ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net