

ಬೆಂಗಳೂರು: ಕ್ಷತ್ರಿಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ನೂರಾರು ಕಾರ್ಯಕರ್ತರು ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ರೇಸ್ ಕೋರ್ಸ್ ರಸ್ತೆ ಗಾಂಧಿ ಪ್ರತಿಮೆ ಬಳಿ ಬುಧವಾರ ಬೆಳಗ್ಗೆ 9ರಿಂದ ಗುರುವಾರ ಬೆಳಗ್ಗೆ 9ಗಂಟೆ ವರೆಗೆ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 1 ಕೋಟಿ ಜನಸಂಖ್ಯೆ ಒಳಗೊಂಡಿರುವ 36 ಕ್ಷತ್ರಿಯ ಉಪ ಪಂಗಡಗಳನ್ನು ಸೇರಿಸಿ ಕ್ಷತ್ರಿಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕು. ಉಪ ಪಂಗಡಗಳು ಒಟ್ಟಾಗಿ ತಮ್ಮ ಕ್ಷತ್ರಿಯ ಜನಾಂಗದ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದಲ್ಲದೆ, ಮರಾಠ ಕ್ಷತ್ರಿಯ ಸಮಾಜವನ್ನು ಪ್ರವರ್ಗ 3ಬಿಯಿಂದ 2ಎಗೆ ಹಾಗೂ ತಿಗಳ ಕ್ಷತ್ರಿಯ ಸಮಾಜವನ್ನು ಪ್ರವರ್ಗ 2ಎಯಿಂದ 1ಗೆ ಸೇರ್ಪಡೆ ಮಾಡಬೇಕು. ಕ್ಷತ್ರಿಯ ಸಮಾಜದಲ್ಲಿ ಕಡುಬಡವರು ಇದ್ದು, ಅವರ ಅಭಿವೃದ್ಧಿಗೆ ಸರ್ಕಾರ ಗಮನ ಕೊಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಮರಾಠ ಅಭಿವೃದ್ಧಿ ನಿಗಮವನ್ನು ಸರ್ಕಾರ ಸ್ಥಾಪನೆ ಮಾಡಿದೆ. ಕ್ಷತ್ರಿಯ ಸಮಾಜದ 36 ಉಪ ಪಂಗಡಗಳಲ್ಲಿ ಮರಾಠ ಸಹ ಒಂದಾಗಿದೆ. ಇದೇ ಮಾದರಿಯಲ್ಲಿ ಇನ್ನೂ 35 ನಿಗಮ ಸ್ಥಾಪನೆ ಮಾಡುವ ಬದಲು ಕ್ಷತ್ರಿಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದರೆ ಎಲ್ಲರೂ ಒಂದೇ ಪ್ರಾಧಿಕಾರದ ಅಡಿಯಲ್ಲಿ ಬರಲಿದ್ದು, ಸರ್ಕಾರ ಅನುದಾನ ಬಿಡುಗಡೆಗೂ ಅನುಕೂಲವಾಗಲಿದೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಮಾಡಿದರು.