

ಮಂಡ್ಯ:ತಮಿಳುನಾಡಿಗೆ ನಿರಂತರ ನೀರು ಹರಿಸಿ ಕಾವೇರಿಕೊಳ್ಳದ ಜಲಾಶಯ ಬರಿದು ಮಾಡಿರುವ ರಾಜ್ಯಸರ್ಕಾರದ ಮೇಲಿನ ನಂಬಿಕೆ ಹುಸಿಯಾಗಿದ್ದು, ಸರ್ವೋಚ್ಛ ನ್ಯಾಯಾಲಯದ ತೀರ್ಪು ಕರ್ನಾಟಕದ ಪರ ಬರಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಾವೇರಿ ಮಾತೆಗೆ ಅಭಿಷೇಕ ಮಾಡಿ ಪ್ರಾರ್ಥನೆಯೊಂದಿಗೆ ಪ್ರತಿಭಟನೆ ನಡೆಸಿದರು.
ಕಾವೇರಿ ನದಿಯಿಂದ ತಂದಿದ್ದ ನೀರನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿರುವ ಕಾವೇರಿ ಮಾತೆಗೆ ಜಲಾಭಿಷೇಕ ಮಾಡಿ, ಹಾಲು, ಅರಿಶಿನ, ಕುಂಕುಮ, ತುಪ್ಪ, ಸಕ್ಕರೆ, ಜೇನುತುಪ್ಪ ಮತ್ತು ಎಳನೀರು ಅಭಿಷೇಕ ಮಾಡಿ ಹಸಿರು ಸೀರೆ ಹೊದಿಸಿ ಪುಷ್ಪಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪ್ರಾರ್ಥನೆ ಮಾಡಿದರು.
ವೇದಿಕೆಯ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶ್‌ಗೌಡ ಮಾತನಾಡಿ, ಕಾವೇರಿಕೊಳ್ಳದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಾಣುತ್ತಿದ್ದರೂ, ಇಂದಿಗೂ ಸಹ ಪ್ರತಿನಿತ್ಯ ನೀರು ಬಿಡುಗಡೆ ಮಾಡುತ್ತಿದೆ. ಇದ್ದ ನೀರೆಲ್ಲ ಖಾಲಿಯಾಗುತ್ತಿದ್ದು, ಆಳುವ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳ ಮೇಲೆ ಇಟ್ಟಿದ್ದ ನಂಬಿಕೆ ಸಂಪೂರ್ಣ ಹುಸಿಯಾಗಿರುವುದರಿಂದ ನಮಗೆ ಕಾವೇರಿ ಮಾತೆಯೇ ದಿಕ್ಕು ಎಂದು ಹೇಳಿದರು.
ಕಾವೇರಿ ಮಾತೆಯನ್ನು ನಂಬಿ ಬದುಕು ಸಾಧಿಸುತ್ತಿರುವ ರೈತರ ಕಾಪಾಡಲು ಕಾವೇರಮ್ಮ ಮಳೆಯನ್ನಾದರೂ ಸುರಿಸಿ ಸಮಸ್ಯೆಗೆ ಪರಿಹಾರ ರೂಪಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಇದರ ಜತೆಗೆ ಸೆ.6ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಕರ್ನಾಟಕದ ಪರ ಬರಲಿ ಎಂದು ಆಶಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ರಾಜ್ಯವನ್ನಾಳಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರು ದಪ್ಪ ಚರ್ಮದವರಾಗಿದ್ದಾರೆ. ಇವರಿಗೆ ರೈತರ ಕೂಗು ಕೇಳಿಸುತ್ತಿಲ್ಲ, ನಾಡಿನ ಜನರ ಬಲಿಕೊಟ್ಟು ರಾಜಕಾರಣ ಮಾಡಲು ಮುಂದಾಗಿದ್ದಾರೆ, ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಜಲಾಶಯಗಳಿಂದ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರು ನಿಲ್ಲಿಸಿ ರೈತರ ಹಿತ ಕಾಪಾಡಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷೃ ವಹಿಸಿದೆ. ಕಾವೇರಿ ನಿಯಂತ್ರಣ ಸಮಿತಿ, ಪ್ರಾಧಿಕಾರ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾಸ್ತವ ವಿಚಾರ ಮಂಡನೆ ಮಾಡುವಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ವಾಸ್ತವ ಮನವರಿಕೆ ಮಾಡಿಕೊಡಲು ಮುಂದಾಗಬೇಕಾಗಿದೆ. ರಾಜ್ಯದ ಸಂಸದರು ಮತ್ತು ಶಾಸಕರು ದನಿ ಎತ್ತುತ್ತಿಲ್ಲ. ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದ್ದರೂ ಹೋರಾಟ ಮಾಡಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್, ರಾಮನಗರ ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಅಜಯ್, ಗೌಡಗೆರೆ ಧನಂಜಯ, ರೋಸಿ, ನಿರ್ಮಲಾ, ಮಂಗಳಮ್ಮ, ರಾಜಮ್ಮ, ಚಿಕ್ಕನಹಳ್ಳಿ ಸಿದ್ದಪ್ಪಾಜಿ, ನಂದನ್‌ಗೌಡ ಇತರರಿದ್ದರು.