ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

12
Published on

ಮೈಸೂರು: ರಾಜ್ಯ ಸರ್ಕಾರ ಬರಗಾಲ ಹಾಗೂ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು, ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ಬಾರಿ ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಸರ್ಕಾರ ತೆಲಂಗಾಣ, ಪಂಜಾಬ್ ಮಾದರಿಯಲ್ಲಿ 6040 ಕೃಷಿ ಪತ್ತಿನ ಸಹಕಾರ ಸಂಘಗಳ ಸುಮಾರು 25 ಸಾವಿರ ಕೋಟಿ ರೂ. ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸುಮಾರು 950 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಆ ಹಣವನ್ನು ಸರ್ಕಾರ ಕೊಡಿಸಬೇಕು. ಇಲ್ಲವಾದರೆ ಮುಂಬರುವ ಬಜೆಟ್‌ನಲ್ಲಿ ಸರ್ಕಾರವೇ ರೈತರಿಗೆ ಪಾವತಿಸಿ ಕಾರ್ಖಾನೆಯವರಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಈ ವರ್ಷ ಕಬ್ಬು ಕಟಾವು ಮುಗಿಯುತ್ತಿರುವುದರಿಂದ ಪ್ರತಿ ಟನ್‌ಗೆ 400 ರೂ. ಹೆಚ್ಚುವರಿ ದರ ನಿಗದಿ ಮಾಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಳುವರಿಯಲ್ಲಿ ಮಾಡುತ್ತಿರುವ ಮೋಸ ತಿಳಿಯಲು ರಚಿಸಿರುವ ತಜ್ಞರ ಸಮಿತಿಗೆ ಸ್ಥಳೀಯ ರೈತರು ಹಾಗೂ ಸಂಘದ ಮುಖಂಡರನ್ನು ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮನಬಂದಂತೆ ಸರ್ಕಾರ ಕಟಾವು, ಸಾಗಣೆ ದರ ನಿಗದಿ ಮಾಡುತ್ತಿದ್ದು, ಮುಖ್ಯಮಂತ್ರಿಗಳು ಈ ಕುರಿತು ಗಮನಹರಿಸಬೇಕು. ಜಮೀನಿನಿಂದ ಸಾಗಣೆ ಮಾಡುವ ಸಂದರ್ಭ ದರ ನಿಗದಿ ಮಾಡಬೇಕು. ಹೆಚ್ಚುವರಿ ವಸೂಲಿ ಮಾಡಿರುವ ಕಟಾವು ಸಾಗಣೆ ಕೂಲಿಯನ್ನು ರೈತರ ಖಾತೆಗೆ ಜಮೆ ಮಾಡಿಸಬೇಕು. ಬ್ಯಾಂಕ್‌ಗಳು ಸಾಲ ವಸೂಲಿಗೆ ನೋಟಿಸ್ ನೀಡಿ ಕೃಷಿಕರಿಗೆ ಕಿರುಕುಳ ನೀಡುತ್ತಿದ್ದು, ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಪರಿಹಾರ ನೀಡಿ:
ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಅಚ್ಚುಕಟ್ಟು ಭಾಗದಲ್ಲಿ ಬರಗಾಲ ಸೃಷ್ಟಿಯಾಗಿದೆ. ಹೀಗಾಗಿ ಪ್ರತಿ ಎಕರೆಗೆ 25 ಸಾವಿರ ರೂ. ನಷ್ಟ ಪರಿಹಾರ ನೀಡಬೇಕು. ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಶೋಷಣೆ ನಿಲ್ಲಿಸಬೇಕು. 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ ವಿಮೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮುಖಂಡರಾದ ಹಾಲಿನ ನಾಗರಾಜ್, ಕೆರೆಹುಂಡಿ ರಾಜಣ್ಣ, ಮಲಿಯೂರು ಹರ್ಷ, ಆಲತ್ತೂರು ಸಿದ್ದಲಿಂಗಪ್ಪ, ಹಾಡ್ಯ ರವಿ, ಕೊಂತಯ್ಯನಹುಂಡಿ ಮಹೇಶ್, ಅಂಬಳೆ ಮಹಾದೇವಸ್ವಾಮಿ, ಮುದ್ದಾಹಳ್ಳಿ ಚಿಕ್ಕಸ್ವಾಮಿ, ಮಂಜೇಶ್ ನಾಗೇಂದ್ರ, ಊಡಿಗಾಲ ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net