ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ

Karave 1
Published on

ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ ಪೂಜಾರಿ ಅಭಿಮತ

ಹಿಂದಿ ಹೇರಿಕೆ ಖಂಡಿಸಿ ಡಿಸಿ ಕಚೇರಿ ಬಳಿ ಕರವೇ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶವೂ ಸೇರಿದಂತೆ ಕರ್ನಾಟಕದಲ್ಲೂ ಪ್ರಜಾಪ್ರಭುತ್ವ ಸರ್ಕಾರವಿದೆ. ರಾಜರೇ ಇಲ್ಲದ ಕಾಲದಲ್ಲಿ ರಾಜಭಾಷೆ ಹಿಂದಿ ಇರಲು ಹೇಗೆ ಸಾಧ್ಯ? ಎಲ್ಲೆಡೆ ಇರುವುದು ಅಲ್ಲಿನ ನೆಲದ ಭಾಷೆ ಮಾತ್ರ. ಹೀಗಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಕರವೇ (ನಾರಾಯಣ ಗೌಡ ಬಣ) ಉಡುಪಿ ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ ಪೂಜಾರಿ ಹೇಳಿದರು.

ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆ ಮಾಡುವುದನ್ನು ವಿರೋಧಿಸಿ ಕರವೇ ರಾಜ್ಯವ್ಯಾಪಿ ಕರೆ ನೀಡಿದ್ದ ಹೋರಾಟದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಬಳಿ ಜಿಲ್ಲಾ ಕರವೇ ವತಿಯಿಂದ ಸೋಮವಾರ (ಸೆ27) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಭ್ರಷ್ಟ ರಾಜಕಾರಣಿಗಳ ಬಂಧಿಸಿ

ಬೆಂಗಳೂರಿನಲ್ಲಿ ನಿನ್ನೆ (ಸೆ.26) ಸಂಸದೀಯ ರಾಜಭಾಷಾ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಕುತಂತ್ರದ ಸಮಾಲೋಚನಾ ಕಾರ್ಯಾಗಾರಕ್ಕೆ ಕರವೇ ಮುತ್ತಿಗೆ ಹಾಕಿ, ಹಿಂದಿ ಭಾಷೆಯಲ್ಲಿದ್ದ ಬ್ಯಾನರ್​ ಹರಿದು ಹಾಕಿದೆ. ಅದು ಕನ್ನಡಕ್ಕಾಗಿ, ತಾಯಿ ಭಾಷೆ ರಕ್ಷಣೆಗಾಗಿ ನಡೆಸಿದ ಹೋರಾಟ. ಆದರೆ, ಕನ್ನಡಪರ ಹೋರಾಟಗಾರರನ್ನು ಸರ್ಕಾರ ಬಂಧಿಸುವುದು ಎಷ್ಟು ಸೂಕ್ತ? ಕನ್ನಡ ರಕ್ಷಣೆಗೆ, ಕನ್ನಡ ಬೆಳಸಲು ನಮಗೆ ಮುಕ್ತ ಅವಕಾಶ ನೀಡಿ. ರಾಜ್ಯದ ಕೆಲ ಭ್ರಷ್ಟ ರಾಜಕಾರಣಿಗಳು ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದಾರೆ. ಅವರನ್ನು ಮೊದಲು ಬಂಧಿಸಿ ಎಂದು ಪ್ರಭಾಕರ ಪೂಜಾರಿ ಆಗ್ರಹಿಸಿದರು.

ಸರ್ಕಾರಕ್ಕೆ ಮನವಿ

Karave 2
ಹಿಂದಿ ಹೇರಿಕೆಯು ದೇಶಕ್ಕಷ್ಟೇ ಅಲ್ಲ, ಭಾರತದ ಐಕ್ಯತೆಗೆ ಧಕ್ಕೆ ತರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರವು ಕೂಡಲೇ ರಾಜ್ಯದಲ್ಲಿರುವ ರಾಜಭಾಷಾ ಸಮಿತಿ/ಆಯೋಗ ರದ್ದುಪಡಿಸಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಹಿಂದಿಗೆ ನೀಡಿರುವ ಹೆಚ್ಚುಗಾರಿಕೆ ನಿಲ್ಲಿಸಬೇಕು, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ಅಧಿಕೃತ ಆಡಳಿತ/ಸಂವಹನ ಭಾಷೆಗಳನ್ನಾಗಿ ಘೋಷಿಸಬೇಕು ಎಂಬ ಮನವಿಯನ್ನು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಕರವೇ ಜಿಲ್ಲಾ ಉಪಾಧ್ಯಕ್ಷರಾದ ಅನಿಲ ಪೂಜಾರಿ, ಸಾಬುದ್ದೀನ್​, ನಗರ ಅಧ್ಯಕ್ಷ ಅಜರುದ್ದೀನ್​, ಜಿಲ್ಲಾ ಸಂಚಾಲಕರಾದ ಕೃಷ್ಣ ಪಾಂಗಾಳ, ಸುಧಾಕರ್​ ಕಲ್ಮಾಡಿ, ಕಾಪು ತಾಲೂಕು ಅಧ್ಯಕ್ಷ ವೀರೇಶ, ಕಾರ್ಕಳ ತಾಲೂಕು ಅಧ್ಯಕ್ಷ ಇಮ್ರಾನ್​ ಶೇಖ್​, ಕುಂದಾಪುರ ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಹಿಳಾ ಘಟಕದ ಉಪಾಧ್ಯಕ್ಷೆಯರಾದ ಅಶ್ವಿನಿ ನಾಯಕ, ಅನಿತಾ, ಪೂರ್ಣಿಮಾ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net